ರಾಮನಗರ:ರಾಜ್ಯದಲ್ಲಿ ಲಾಕ್‌ಡೌನ್ ಬಳಿಕ ಸ್ಥಗಿತಗೊಂಡಿದ್ದ ಕೈಗಾರಿಕೆಗಳು ಸಹಜ ಸ್ಥಿತಿಯತ್ತ ಮರುಳುತ್ತಿದ್ದು, ಇನ್ನೊಂದೆರಡು ವಾರಗಳಲ್ಲಿ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಜಿಲ್ಲೆಯ ಹಾರೋಹಳ್ಳಿ ಮತ್ತು ಬಿಡದಿ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ಇಲ್ಲಿನ ಕೈಗಾರಿಕೋದ್ಯಮಿಗಳ ಜೊತೆ ಚರ್ಚಿಸಿದ ಬಳಿಕ ಮಾತನಾಡಿದ ಶೆಟ್ಟರ್, ರಾಜ್ಯದಲ್ಲೀಗ ಶೇ. 70ರಷ್ಟು ಕೈಗಾರಿಕೆಗಳು ಪ್ರಾರಂಭಗೊಂಡಿವೆ. ಇನ್ನುಳಿದ ಶೇ. 30ರಷ್ಟು ಕೈಗಾರಿಕೆಗಳು ಶೀಘ್ರವೇ ಕಾರ್ಯಾರಂಭ ಮಾಡಲಿವೆ ಎಂದರು.
ಕೈಗಾರಿಕೆ ಸೆಳೆಯಲು ವಿನೂತನ ಯೋಜನೆ: ಕೊರೊನಾ ಹಿನ್ನೆಲೆಯಲ್ಲಿ ಚೀನಾದಿಂದ ಸಾವಿರಾರು ಕೈಗಾರಿಕೆಗಳು ನೆಲೆಯನ್ನು ಭಾರತಕ್ಕೆ ಬದಲಾಯಿಸಲು ಉತ್ಸುಕವಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿರುವ ಕೈಗಾರಿಕೋದ್ಯಮಿಗಳಿಗೆ ವಿಶೇಷ ಪ್ರೋತ್ಸಾಹ ಯೋಜನೆಯನ್ನು ರೂಪಿಸಲು ಕ್ರಮ ವಹಿಸಲಾಗುತ್ತಿದೆ. ಈಗಾಗಲೇ ವಿಶೇಷ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರುವ ಕೈಗಾರಿಕೆಗಳನ್ನು ಸೆಳೆಯುವ ಪ್ರಯತ್ನ ಇದರ ಮೂಲಕ ರೂಪಿಸಲಾಗುವುದು ಎಂದರು.
ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ: ಬೆಂಗಳೂರಿನಂತೆ ಜಿಲ್ಲೆಯಲ್ಲಿರುವ ಹಾರೋಹಳ್ಳಿ ಮತ್ತು ಬಿಡದಿ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನಷ್ಟು ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಇವುಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಇಲ್ಲಿನ ಕೈಗಾರಿಕೋದ್ಯಮಿಗಳೊಂದಿಗೆ ಇಂದು ಚರ್ಚಿಸಿರುವುದಾಗಿ ಶೆಟ್ಟರ್ ತಿಳಿಸಿದರು.
ಕಾರ್ಮಿಕರ ಕೊರತೆ ಇಲ್ಲ:ಲಾಕ್‌ಡೌನ್ ಸಡಿಲಗೊಂಡ ಬಳಿಕ ಕೈಗಾರಿಕೆಗಳಿಗೆ ಆರಂಭದಲ್ಲಿ ಕಾರ್ಮಿಕರ ಸಮಸ್ಯೆಯುಂಟಾಗಿತ್ತು. ವಾರದ ಬಳಿಕ ಕೈಗಾರಿಕೆಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಹೀಗಾಗಿ ಕಾರ್ಮಿಕರು ಸಹ ಕೆಲಸಗಳಿಗೆ ಬರುತ್ತಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತದೆ ಎಂದ ಅವರು, ಕೈಗಾರಿಕೆಗಳನ್ನು ಆರಂಭಿಸುವುದರ ಜೊತೆಗೆ ಎಲ್ಲಾ ಕೈಗಾರಿಕೆಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಎಲ್ಲರೂ ಕೆಲಸ ಮಾಡುವ ವೇಳೆ ಮಾಸ್ಕ್ ಬಳಕೆ ಮಾಡಬೇಕು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವಂತೆ ಮನವಿ ಮಾಡಿದರು.