ರಾಮನಗರ: ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಿ, ಕೂಡಲೇ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕಡೆಗೆ ಗಮನ ನೀಡಿದ್ದರೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುತ್ತಿತ್ತು. ನಾನು ಸಮಸ್ಯೆ ಬಗೆಹರಿಸಲು ಹೋದರೆ ಅಡ್ಡಿ ಪಡಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಐದು ವರ್ಷದಿಂದ ಕ್ಷೇತ್ರದ ಶಾಸಕರಾಗಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕ್ಷೇತ್ರದ ಕಡೆ ಹೆಚ್ಚು ಗಮನ ನೀಡುವುದಿಲ್ಲ. ಎಲೆಕೇರಿ ರೈಲ್ವೆ ಕಾಲೋನಿಯ ಐದಾರು ಮನೆಯವರ ಜೊತೆ ಚರ್ಚೆ ಮಾಡಿದ್ದರೆ ಇಷ್ಟೊತ್ತಿಗೆ ಈ ಕಾಮಗಾರಿ ಪೂರ್ಣಗೊಳ್ಳುತಿತ್ತು. ಆದರೆ, ಶಾಸಕರು ಯಾವುದೇ ಕೆಲಸ ಮಾಡಿಲ್ಲ. ಅದು ಅವರಿಗೆ ಬೇಕಾಗಿಲ್ಲ. ಅವರಿಗೆ ನಿಜವಾದ ಇಚ್ಚಾ ಶಕ್ತಿ ಇದ್ದರೆ ನಗರದ ಖಾಸಗಿ ಬಸ್ ನಿಲ್ದಾಣ ಕೆಲಸ ಪ್ರಾರಂಭಿಸಬೇಕಿತ್ತು. ಅವರದ್ದೆ ಪಕ್ಷದ ನಾಯಕರು ಆ ಜಾಗದ ಮೇಲೆ ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದಾರೆ. ಈಗ ಅವರನ್ನೇ ಜೊತೆಯಲ್ಲಿ ಇಟ್ಟುಕೊಂಡು ಮೆರೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ಸ್ಥಳೀಯ ಜೆಡಿಎಸ್ ಮುಖಂಡರ ವಿರುದ್ಧ ಗರಂ ಆದರು.
ಎಲೆಕೇರೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದ ಸಿಪಿವೈ:ದಶಕ ಕಳೆದರು ಕೂಡ ತಾಲೂಕಿನ ಎಲೆಕೇರಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮೇಲ್ಸೇತುವೆ ಆಗದ ಹಿನ್ನೆಲೆಯಲ್ಲಿ ಸಾಕಷ್ಟು ದೂರುಗಳು ಬಂದಿದ್ದರಿಂದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ, ಅರ್ಧಕ್ಕೆ ನಿಂತಿದ್ದ ಕಾಮಗಾರಿ ವೀಕ್ಷಣೆ ಮಾಡಿದರು. ಇಲ್ಲಿನ ಸ್ಥಳೀಯ ತಮಿಳು ಕಾಲೋನಿಯ ಐದಾರು ಮನೆ ತೆರವು ಮಾಡಿದ್ದರೆ ಕಾಮಗಾರಿ ಮುಗಿದು ವರ್ಷ ಕಳೆಯಬೇಕಿತ್ತು. ಆದರೆ ಸ್ಥಳೀಯರು ಕೋರ್ಟ್ ಮೊರೆ ಹೋಗಿದ್ದರಿಂದ ಕಾಮಗಾರಿ ಅರ್ಧಕ್ಕೆ ಮೊಟಕುಗೊಳಿಸಿತ್ತು.