ರಾಮನಗರ: ನಾನು ನೋಡದಿರುವ ಬಿಜೆಪಿ ಪಕ್ಷವಾ? ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ.
ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, 2006ರಲ್ಲಿ ಎಲ್ಲರೂ ಮಂಗನ ತರಹ ಹಾರಲು ರೆಡಿಯಾಗಿದ್ದರು. ಆ ದಿನ ಬಿಜೆಪಿಯನ್ನ ಉಳಿಸಿದ್ದು ನಾನು. ಅಂದು ಇದೇ ಯಡಿಯೂರಪ್ಪನವರು ನಮ್ಮ ಪಕ್ಷಕ್ಕೆ ಅರ್ಜಿ ಹಾಕ್ಕೊಂಡು ನನ್ನ ಹತ್ತಿರ ಬಂದಿದ್ದರು. ನನಗೆ ಮಂತ್ರಿ ಮಾಡಿ, ಬಿಜೆಪಿಗೆ ರಾಜೀನಾಮೆ ಕೊಡ್ತೀನಿ ಅಂತಾ ಬಂದಿದ್ದರು. ಹಾಗಾಗಿ ಬಿಜೆಪಿಯಿಂದ ನನ್ನನ್ನ ಏನೂ ಮಾಡಲು ಆಗಲ್ಲ ಎಂದರು.
ಓದಿ:ಕುಮಾರಸ್ವಾಮಿ ಜೋಕರ್, ಎಲ್ಲ ಪಕ್ಷದ ಜತೆ ಹೊಂದಾಣಿಕೆಯಾಗುವ ಅವಕಾಶವಾದಿ : ಸಚಿವ ಸಿ ಪಿ ಯೋಗೀಶ್ವರ್
ಇದಲ್ಲದೆ ರಾಮನಗರ ಜಿಲ್ಲೆಯಲ್ಲಿ ನನ್ನನ್ನ ಖಾಲಿ ಮಾಡಿಸಲು ನಿಂತಿದ್ದಾರೆ. ಆದರೆ ದೇವೇಗೌಡರ ಕುಟುಂಬದ ಕೊಡುಗೆ ಜಿಲ್ಲೆಯ ಜನರಿಗೆ ಗೊತ್ತಿದೆ. ನಾನು ಬಂಡೆ ಹೊಡೆದಿಲ್ಲ, ಜನರ ಹಣ ಲೂಟಿ ಮಾಡಿಲ್ಲ. ನನ್ನನ್ನ ಖಾಲಿ ಮಾಡಿಸಲು ಬಂದವರು ಅವರೇ ಖಾಲಿಯಾಗಿದ್ದಾರೆ. ಹಾಗೆಯೇ ರಾಮನಗರ - ಚನ್ನಪಟ್ಟಣಕ್ಕೆ ಮಾಡಿರುವ ಅಭಿವೃದ್ಧಿ ಜನರಿಗೆ ಗೊತ್ತಿದೆ. ನಾನು ಸಿಎಂ ಆಗಿದ್ದಾಗ ಮಾಡಿರುವ ಕೆಲಸ ಜನರಿಗೆ ಗೊತ್ತಿದೆ. ಜನರಿಂದ ತಲೆ ಹೊಡೆದ ಹಣದಲ್ಲಿ ಸಚಿವ ಸಿಪಿವೈ ಮಂತ್ರಿಯಾಗಿದ್ದಾನೆ ಅಷ್ಟೆ. ಯಡಿಯೂರಪ್ಪನ ಮೆಚ್ಚಿಸಲು, RSS ನಾಯಕರ ಮೆಚ್ಚಿಸಲು ಸಿಪಿವೈ ಹೀಗೆ ಮಾತನಾಡ್ತಿದ್ದಾನೆ. ನನ್ನ ಬೈಕೊಂಡು ಹೊಟ್ಟೆಪಾಡು ಮಾಡ್ತಿದ್ದಾನೆ. ಚನ್ನಪಟ್ಟಣದಲ್ಲಿ ನನ್ನನ್ನ ಏನೂ ಮಾಡಲು ಸಾಧ್ಯವಿಲ್ಲ. ನಾನು ಈ ಮಣ್ಣಿನ ಮಗ, ನನ್ನ ಅಂತಿಮ ಕಾಲ ರಾಮನಗರದಲ್ಲಿಯೇ. ರಾಮನಗರ ಜಿಲ್ಲೆ ಯಾರ ಸ್ವತ್ತಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸಚಿವ ಸಿಪಿವೈ ವಿರುದ್ಧ ವಾಗ್ಧಾಳಿ:
ಇನ್ನು ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾದರು. ನೀನು ನನ್ನ ಮುಂದೆ ಇನ್ನೂ ಬಚ್ಚಾ ಇದೀಯಾ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಬೇಡ. ನಿನಗಿಂತಲೂ ಚೆನ್ನಾಗಿ ಮಾತನಾಡಲು ನನಗೂ ಬರುತ್ತೆ. ಸಚಿವ ಆಗಿದ್ದೀಯಾ, ಕೆಲಸ ಮಾಡಿಕೊಂಡು ಹೋಗು. ನನ್ನ ವಿರುದ್ಧ ಮಾತನಾಡಿ ಲೀಡರ್ ಆಗುವ ಪ್ರಯತ್ನ ಬೇಡ. ಯಾರೋ ಅಡವಿಟ್ಟ ಇಸ್ಪೀಟು ದುಡ್ಡಲ್ಲಿ ನೀನು ಮಂತ್ರಿಯಾಗಿದ್ದೀಯಾ ಅಷ್ಟೆ. ಇವನು ನನ್ನ ಬಗ್ಗೆ ಏನು ಮಾತನಾಡಲು ಸಾಧ್ಯ ಎಂದು ಸಿಪಿವೈಗೆ ಟಾಂಗ್ ಕೊಟ್ಟರು.