ರಾಮನಗರ:ನಾನು ರಾಮನ ಭಕ್ತ, ನವ ರಾಮನಗರ ನಿರ್ಮಾಣ ಮಾಡುವುದು ಹಾಗೂ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ನನ್ನ ಗುರಿ ಎಂದು ರಾಮನಗರದ ಶಾಸಕ ಹೆಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.
ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಈಗಲೇ ನಾನು ಏನನ್ನೂ ಹೇಳುವುದಿಲ್ಲ. ಕಳೆದ 20 ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ರಾಮನಗರ ತಾಲ್ಲೂಕಿನ ಅಭಿವೃದ್ಧಿಯನ್ನು ಮಾಡುವುದಕ್ಕೆ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.
ಸೇವೆ ಮಾಡಲು ನನಗೆ ಜನರು ಅವಕಾಶ ಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಹಲವು ರೀತಿಯ ಸಮಸ್ಯೆಗಳಿವೆ. ಹಂತಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ ಜನರಿಗೆ ಸೂರು-ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಭಿವೃದ್ಧಿ ಮಾಡಲು ನನಗೆ ಎಲ್ಲರೂ ಸಹಕಾರ ನೀಡಬೇಕು. ಲಂಚ ತೆಗೆದುಕೊಳ್ಳುವ ವ್ಯಕ್ತಿ ನಾನಲ್ಲ. ರಾಮನಗರದಲ್ಲಿ ಹಿಂದಿನ ವರ್ಷಗಳಲ್ಲಿ ಲಂಚ ತಾಂಡವಾಡುತ್ತಿತ್ತು. ನನಗೆ ಹಣ, ಅಧಿಕಾರದ ಆಸೆ ಇಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟರು.
ಜೆಡಿಎಸ್ ಭದ್ರ ಕೋಟೆ ಎಂದೇ ಕರೆಸಿಕೊಂಡಿದ್ದ ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋತಿರುವುದು ನಿಜಕ್ಕೂ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಕಳೆದ ಬಾರಿ ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಅವರು ರಾಮನಗರದ ಕ್ಷೇತ್ರದ ಶಾಸಕರಾಗಿದ್ದರು. ಮಗನ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಜೆಡಿಎಸ್ ಭದ್ರಕೋಟೆಯಲ್ಲಿ ನಿಖಿಲ್ ಅವರನ್ನು ಕಣಕ್ಕಿಳಿಸಿ ಗೆಲ್ಲಿಸುವ ಆಸೆಯನ್ನು ಹೊಂದಿದ್ದರು. ಅದಕ್ಕಾಗಿ ಕ್ಷೇತ್ರದಲ್ಲಿ ಸಂಚರಿಸಿ ಸಾಕಷ್ಟು ಪ್ರಚಾರವನ್ನು ಮಾಡಿದ್ದರು. ಆದರೆ ಚುನಾವಣೆಯಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಗಲಿಲ್ಲ.