ರಾಮನಗರ: ವಸತಿ ಸಚಿವ ವಿ. ಸೋಮಣ್ಣ ಅವರು ಇಂದು ಕನಕಪುರ ತಾಲ್ಲೂಕಿನ ಗುತ್ತಲಹುಣಸೆ ಗ್ರಾಮದಲ್ಲಿರುವ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಗುತ್ತಲೆಹುಣಸೆ ಗ್ರಾಮಕ್ಕೆ ವಸತಿ ಸಚಿವ ವಿ.ಸೋಮಣ್ಣ ಭೇಟಿ ನಂತರ ದೇವಸ್ಥಾನದ ಹತ್ತಿರ ಇರುವ ಪಡಸಾಲೆಯಲ್ಲಿ ಕುಳಿತು ಗ್ರಾಮಸ್ಥರೊಂದಿಗೆ ಮಾತನಾಡಿದರು. ಗ್ರಾಮಸ್ಥರು ತಮ್ಮ ಊರಿನ ಬಳಿ ಇರುವ ಗಂಗಾಧರೇಶ್ವರ ದೇವಸ್ಥಾನಕ್ಕೆ ರಸ್ತೆ ಮಾಡಿಸಿಕೊಡುವಂತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸುವಂತೆ ಮನವಿ ಸಲ್ಲಿಸಿದರು. ಮನವಿ ಆಲಿಸಿದ ಸಚಿವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ನಿವಾರಿಸುವಂತೆ ತಿಳಿಸಿದರು.
ಅಲೆಮಾರಿಗಳು, ಕಾಡು ಗೊಲ್ಲರು ಸೇರಿದಂತೆ ಹಿಂದುಳಿದ ಸಮುದಾಯಗಳಿಗೆ ವಸತಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸೂರಿಲ್ಲದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮನವಿ ಕಳುಹಿಸಿಕೊಟ್ಟರೆ ಮನೆ ನಿರ್ಮಾಣಕ್ಕೆ 1,20,000 ರೂ. ಸಹಾಯಧನ ನೀಡಲಾಗುವುದು ಎಂದರು.
ಓದಿ:ರಾಜ್ಯದಲ್ಲಿ 10 ಲಕ್ಷ ಮನೆಗಳ ನಿರ್ಮಾಣಕ್ಕೆ ಯೋಜನೆ: ವಸತಿ ಸಚಿವ ವಿ.ಸೋಮಣ್ಣ
ರಾಜ್ಯದಲ್ಲಿ ಅಂದಾಜು 69,000 ಜನರಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ. ಗ್ರಾಮ ಪಂಚಾಯಿತಿಯಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಶಾಸಕರು ತಮ್ಮ ವ್ಯಾಪ್ತಿಯ 35 ಜನರ ಹೆಸರನ್ನು ಒದಗಿಸುವಂತೆ ಕೋರಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸ ಕೂಡ ಗ್ರಾಮಸ್ಥರು ಮಾಡಬೇಕು. ಅಂತವರಿಗೆ ಸೂರು ಒದಗಿಸಲಾಗುವುದು ಎಂದರು.