ರಾಮನಗರ:ಬೆಳ್ಳಂಬೆಳಗ್ಗೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ರಾಜೇಶ್ (42), ಉಮಾ (35) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿಗಳು. ರಾಜೇಶ್ ಕುಟುಂಬ ಬೆಂಗಳೂರಿನ ಪೀಣ್ಯ ಮೂಲದವರಾಗಿದ್ದಾರೆ.
ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿ ಓಮ್ನಿ ಕಾರೊಂದು ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಮುಂದೆ ಹೋಗುತ್ತಿದ್ದ ಇನ್ನೊಂದು ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಲಾರಿ ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿತ್ತು. ಅಪಘಾತದ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ರಾಮನಗರ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಘಾತ:ಇತ್ತೀಚಿನ ಕೆಲ ತಿಂಗಳಿಂದ ಹೆದ್ದಾರಿಯಲ್ಲಿ ಅಪಘಾತಗಳ ಪ್ರಮಾಣ ಕಡಿಮೆಯಾಗಿತ್ತು. ಈಗ ಮತ್ತೊಮ್ಮೆ ವಾಹನ ಚಾಲಕರ ಅತಿಯಾದ ವೇಗದಿಂದ ಮತ್ತೆ ಅಪಘಾತಗಳ ಪ್ರಮಾಣ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕಿದೆ.
ದಶಪಥ ಹೆದ್ದಾರಿಯಲ್ಲಿ ಸರಣಿ ಅಪಘಾತ:ಇದೇ ಬೆಂಗಳೂರ- ಮೈಸೂರು ದಶಪಥ ಹೆದ್ದಾರಿಯಲ್ಲಿ ಇಂದು ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿತ್ತು. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗೌರಿಪುರ ಗ್ರಾಮದಲ್ಲಿ ಅತಿ ವೇಗವಾಗಿ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂಭಾಗದಲ್ಲಿದ್ದ ಕಾರುಗಳಿಗೂ ಡಿಕ್ಕಿಯಾಗಿವೆ. ಇದರಿಂದಾಗಿ ಒಂದು ಕಾರು ನಡು ರಸ್ತೆಯಲ್ಲೇ ಹೊತ್ತಿ ಉರಿದಿದೆ.
ಬೆಂಕಿ ಹೊತ್ತಿಕೊಂಡ ಕಾರಿನಲ್ಲಿ ಇದ್ದವರನ್ನು ಪೊಲೀಸರು ರಕ್ಷಣೆ ಮಾಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರಿನ ಕಿಟಕಿಯ ಗಾಜುಗಳನ್ನು ಒಡೆದು, ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ. ಈ ಸರಣಿ ಅಪಘಾತದಲ್ಲಿ, ಶ್ರೀರಂಗಪಟ್ಟಣದ ಕಡೆಗೆ ತೆರಳುತ್ತಿದ್ದ ಮಂಡ್ಯ ಎಸ್ ಪಿ ವಾಹನಕ್ಕೂ ಕಾರು ಡಿಕ್ಕಿ ಹೊಡೆದಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರು.
ಮದ್ಯದ ಅಮಲಿನಲ್ಲಿ ಪಾದಚಾರಿಗೆ ಡಿಕ್ಕಿ: ಕುಡಿದ ಅಮಲಿನಲ್ಲಿ ಶಾಲಾ ವಾಹನದ ಚಾಲಕ ಪಾದಚಾರಿ ಹಾಗೂ ಇನ್ನೊಬ್ಬ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನ ದೊಡ್ಡಬಾಣಸವಾಡಿಯಲ್ಲಿ ಇಂದು ನಡೆದಿದೆ. ಅಂಜಿನಪ್ಪ ಎಂಬವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ: ಹೊತ್ತಿ ಉರಿದ ಕಾರು.. ಮಂಡ್ಯ ಎಸ್ಪಿ ಕಾರಿಗೂ ಡಿಕ್ಕಿ