ರಾಮನಗರ:ವರುಣನ ಅಬ್ಬರಕ್ಕೆ ರಾಮನಗರದಲ್ಲಿ ಮೊದಲ ಬಲಿಯಾಗಿದೆ. ಭಾರಿ ಮಳೆಯಿಂದ ಜನರ ಬದುಕು ಮೂರಾಬಟ್ಟೆಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಬಿಡದಿ ಪುರಸಭೆಯ ವ್ಯಾಪ್ತಿಯ ತೊರೆದೊಡ್ಡಿಯಲ್ಲಿ ಮಳೆಯಿಂದ ಬೃಹತ್ ಆಲದಮರ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಬೋರೆಗೌಡ (50) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಳೆಗೆ ಮರ ಬಿದ್ದು ದುರಂತ:ತೊರೆದೊಡ್ಡಿ ಬಳಿಯ ನಲ್ಲಿಗುಡ್ಡ ಕೆರೆ ಕೋಡಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಪಕ್ಕದಲ್ಲಿರುವ ದೊಡ್ಡ ಆಲದಮರ ಭಾರಿ ಮಳೆಯಿಂದ ಸೋಮವಾರ ನೆಲಕ್ಕುರುಳಿದೆ. ಈ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ದುರಂತ ಸಂಭವಿಸಿದೆ.
ಮಳೆ ನೀರಲ್ಲಿ ಕೊಚ್ಚಿಹೋದ ಹಸು: ಕನಕಪುರ ರಸ್ತೆಯಲ್ಲಿನ ಗೌಡಯನದೊಡ್ಡಿ ಬಳಿ ಮಳೆಯಿಂದ ಭರ್ತಿಯಾದ ಅರ್ಕಾವತಿ ನದಿ ನೀರಲ್ಲಿ ಹಸುವೊಂದು ತೇಲಿ ಹೋಗಿದೆ. ಸೇತುವೆ ಮೇಲ್ಭಾಗದಲ್ಲಿದ್ದ ಸಾರ್ವಜನಿಕರು ಹಸುವನ್ನ ಕಾಪಾಡಲು ಆಗದೆ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಾ ಮರುಕ ವ್ಯಪ್ತಪಡಿಸಿದರು.
(ಇದನ್ನೂ ಓದಿ: ರಾಜ್ಯದಲ್ಲಿ ಸೆಪ್ಟೆಂಬರ್ 2ರವರೆಗೆ ಮಳೆ.. ಹವಾಮಾನ ಇಲಾಖೆ ಮುನ್ಸೂಚನೆ)
ಚುರುಕುಗೊಂಡ ರಕ್ಷಣಾ ಕಾರ್ಯ:ಭಾರಿ ಮಳೆಯಿಂದ ಸಂತ್ರಸ್ತರಿಗೆ ನೆರವಾಗಲು NDRF ತಂಡದಿಂದ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಮಳೆಯ ಮಧ್ಯದಲ್ಲಿ ಸಿಲುಕಿದ ನಾಗರಿಕರ ರಕ್ಷಣೆಗೆ ಕಸರತ್ತು ಆರಂಭಿಸಿದ್ದಾರೆ. ಮತ್ತೊಂದೆಡೆ ರಾಮನಗರದ ಹೃದಯ ಭಾಗದಲ್ಲಿರುವ ಬೆಸ್ಕಾಂ ಕಚೇರಿಯ ಪಕ್ಕದಲ್ಲಿನ ರೈಲ್ವೆ ಅಂಡರ್ ಪಾಸ್ ಬಳಿ KSRTC ಬಸ್ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯವಾಗಿಲ್ಲ. ಮತ್ತೊಂದೆಡೆ ಚನ್ನಪಟ್ಟಣ ತಾಲೂಕಿನ ಅಪಾಯದ ಅಂಚಿನಲ್ಲಿರುವ ತಿಟ್ಟಮಾರನಹಳ್ಳಿ ಗ್ರಾಮದ ಎರಡು ಶತಮಾನಗಳ ಹಳೆಯ ಸೇತುವೆ ಮುಳುಗಡೆಯಾಗಿದೆ. ಕೆರೆಯ ಅಂಚಿನಲ್ಲಿರುವ ಮನೆಯು ಕೂಡ ಕುಸಿಯುತ್ತಿದೆ.