ರಾಮನಗರ:ಜಿಲ್ಲೆಯಾದ್ಯಂತ ಜೋರು ಮಳೆಯಾದ ಪರಿಣಾಮ ಚನ್ನಪಟ್ಟಣ ನಗರದ ಆರ್‌ಎಂಸಿ ಬಡಾವಣೆ, ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿದೆ.
ಬೊಂಬೆನಗರಿಯ ಜನರನ್ನು ಸಂಕಷ್ಟಕ್ಕೆ ತಳ್ಳಿದ ಮಳೆರಾಯ: ಹಲವು ಕಾಲೋನಿಗಳಲ್ಲಿ ಮನೆಗೆ ನುಗ್ಗಿದ ನೀರು ಆರ್‌ಎಂಸಿ ಬಡಾವಣೆಯಲ್ಲಿ ಸರಿ ಸುಮಾರು 150 ಕ್ಕೂ ಹೆಚ್ಚು ಮನೆಗಳಿವೆ, ಬೀಡಿ ಕಾರ್ಮಿಕರ ಕಾಲೋನಿಯಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು, ಇವುಗಳಲ್ಲಿ ಶೇ.90 ಭಾಗದಷ್ಟು ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಹಾಳಾಗಿವೆ. ಸುಮಾರು 13 ವರ್ಷಗಳಿಂದಲೂ ಕೂಡ ನಮಗೆ ಇದೇ ಸಮಸ್ಯೆ ಎದುರಾಗಿದೆ. ಆದರೆ ಯಾವೊಬ್ಬ ಅಧಿಕಾರಿಗಳು ಸಹ ಕ್ರಮ ಕೈಗೊಳ್ಳುತ್ತಿಲ್ಲವೆಂದು ಬಡಾವಣೆಯ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸ್ಥಳಗಳಿಗೆ ಕಳೆದ ತಿಂಗಳು ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ನಗರಸಭೆಯ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟು ತ್ವರಿತವಾಗಿ ಇಲ್ಲಿರುವ ಸಮಸ್ಯೆಗಳನ್ನ ಬಗೆಹರಿಸಬೇಕೆಂದು ಸೂಚನೆ ನೀಡಿದ್ದರು. ಆದರೂ ಕೂಡ ಇಲ್ಲಿನ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ವಹಿಸಿಲ್ಲವೆಂದು ಬಡಾವಣೆಯ ನಿವಾಸಿ ಸೈಯದ್ ಬಾಬು ಆರೋಪಿಸಿದರು.
ಒಟ್ಟಾರೆ ಕಳೆದ ಸುಮಾರು ವರ್ಷಗಳಿಂದಲೂ ಇಲ್ಲಿರುವ ಸಮಸ್ಯೆಗಳು ಕೇವಲ ಸಮಸ್ಯೆಗಳಾಗಿಯೇ ಉಳಿದಿವೆ. ಆದರೆ ನಮ್ಮ ಕಷ್ಟಗಳಿಗೆ ಯಾವ ಪರಿಹಾರವೂ ಸಿಕ್ಕಿಲ್ಲ. ಕ್ಷೇತ್ರದ ಶಾಸಕರು, ಮಾಜಿ ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದ್ರೂ ಕೂಡ ನಮ್ಮ ಸಮಸ್ಯೆ ಬಗೆಹರಿದಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.