ರಾಮನಗರ:ಬಿಜೆಪಿಯಲ್ಲಿ ಸರ್ಕಾದಲ್ಲಿ ಆದ ಲೂಟಿಯೇ ಈ ಸರ್ಕಾರದಲ್ಲೂ ನಡೆಯಲಿದೆ. ಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಆತಂಕ ಬೇಡ. ಇನ್ನು ಎರಡು ಮೂರು ತಿಂಗಳಲ್ಲಿ ಹೊಸ ರಾಜಕೀಯ ಬದಲಾವಣೆ ಆಗುತ್ತೆ ಎಂದು ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದರು.
ಇಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯ ಇಲ್ಲ. ಪಕ್ಷಕ್ಕೆ ಈ ರೀತಿಯ ಸೋಲು ಹೊಸದೇನಲ್ಲ. ಪ್ರಾಮಾಣಿಕ ಕಾರ್ಯಕರ್ತರ ಜೊತೆಗೆ ದೇವರ ಅನುಗ್ರಹ ಇದೆ. ಫಲಿತಾಂಶದಿಂದ ಹಲವರಿಗೆ ಗೊಂದಲ ಆತಂಕ ಉಂಟಾಗಿದೆ. ಹಲವಾರು ಜನ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನೀವು ಧೈರ್ಯವಾಗಿ ಇರಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷ ಕಟ್ಟೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಸಾಂತ್ವನ ಹೇಳಿದರು.
ಹೊಸ ಸರ್ಕಾರ ಹೇಳಿರುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಅಷ್ಟು ಸುಲಭವಿಲ್ಲ, ಈಗ ಘೋಷಣೆ ಮಾಡಿರುವ ಯೋಜನೆಗೆ ಸುಮಾರು 60 ರಿಂದ 70 ಸಾವಿರ ಕೋಟಿ ರೂ. ಹಣ ಬೇಕು. ಇದನ್ನ ಎಲ್ಲಿಂದ ತರುತ್ತಾರೆ?. ಇನ್ನುಳಿದ ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ನೋಡಬೇಕು. ಇದಲ್ಲದೆ ವಿಜಯಪುರ, ರಾಯಚೂರು ಸೇರಿದಂತೆ ಹಲವು ಕಡೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಯವರ ಅಪಪ್ರಚಾರದಿಂದ ಎಷ್ಟೋ ಕಡೆ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. 19 ಸೀಟ್ ಇದ್ದರು ರೈತರ ಪರ ಹೋರಾಟ ಮಾಡುವ ಶಕ್ತಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚನ್ನಪಟ್ಟಣದಲ್ಲಿ ಯಾವುದೇ ಕುಟುಂಬದ ಯಾವುದೇ ಸಮಸ್ಯೆ ಇದ್ದರು ಸ್ಪಂದಿಸುತ್ತೇನೆ. ಒಂದೊಂದು ಸಮುದಾಯದ ಶಾಸಕರು, ಮಾಜಿ ಶಾಸಕರಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿಯನ್ನು ಕೊಡಲಿದ್ದೇನೆ. ಇಡೀ ರಾಜ್ಯದಲ್ಲಿ ನಮ್ಮದೇ ಆದ ಶಕ್ತಿ ಇದೆ. ಚನ್ನಪಟ್ಟಣದಲ್ಲಿ ಗೆಲ್ಲಲು ಎಲ್ಲಾ ಸಮುದಾಯಗಳು ಸಹಕರಿಸಿವೆ. ಹಲವು ಕಡೆ ಕೆಲ ಕಾರಣಕ್ಕೆ ಹಿನ್ನೆಡೆಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲಾಗುವುದು. ನಿಮ್ಮ ಶಕ್ತಿಯೇ ನನಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕರ್ತರಿಗೆ ಧೈರ್ಯ ತುಂಬಿದ ನಿಖಿಲ್: ರಾಮನಗರ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಪಕ್ಷದ ಅತಿ ಹೆಚ್ಚು ನಿಷ್ಠಾವಂತ ಕಾರ್ಯಕರ್ತರು ಇರುವುದು ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ. ರಾಮನಗರದ ಸೋಲಿನ ವಿಚಾರದ ಬಗ್ಗೆ ಪಕ್ಷಾತೀತವಾಗಿ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಅವರು ರಾಮನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಾನು ಸೋತಿರಬಹುದು. ಆದರೆ ರಾಮನಗರದ ಜನ ಸಾಕಷ್ಟು ಪ್ರೀತಿ ತೋರಿಸಿದ್ದಾರೆ ಎಂದರು.
ಸೋತ ಮಾತ್ರಕ್ಕೆ ಮನೆಯಲ್ಲಿ ಕೂರುವುದಿಲ್ಲ. ನಿಮ್ಮ ಜತೆ ಇರುತ್ತೇನೆ. ಸೋಲು ಗೆಲುವು ನಮ್ಮ ಕುಟುಂಬಕ್ಕೆ ಹೊಸತಲ್ಲ. ನನಗಿನ್ನು ವಯಸ್ಸಿದೆ, ಹೆಚ್‌ಡಿಡಿ, ಹೆಚ್‌ಡಿಕೆಯಂತೆ ಜನಸೇವೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರು, ಮುಖಂಡರು ಧೃತಿಗೆಡದೆ ಕಾರ್ಯ ನಿರ್ವಹಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ:ಸಿದ್ದರಾಮಯ್ಯಗೆ ಸಿಎಂ ಪಟ್ಟ, ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಜ್ಜ ನುಡಿದ ಕಾರ್ಣಿಕ ನಿಜವಾಯ್ತಾ?