ರಾಮನಗರ: ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೋರಾಟವು ಅಜರಾಮರವಾಗಿದೆ. ಪ್ರಸ್ತುತ ಅವರು ಯಾವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಮಟ್ಟಿಗೆ ಇಲ್ಲ. ಅವರ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಂದೆಯ ಹಿಂದಿನ ದಿನಗಳನ್ನು ನೆನೆದು ಭಾವುಕರಾದರು.
ಬೊಂಬೆನಗರಿ ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವದಲ್ಲಿ ಭಾಗವಹಿಸಿ ಬೃಹತ್ ವೇದಿಕೆಯಲ್ಲಿ ಮಾತನಾಡಿದ ಅವರು, ನಾಡದೇವತೆ ಚಾಮುಂಡೇಶ್ವರಿಯ ಆಶೀರ್ವಾದವಿದೆ. ಈ ಬಾರಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರೋದು ನೂರಕ್ಕೆ ನೂರರಷ್ಟು ಖಚಿತ. ನಾನೇ ಮುಖ್ಯಮಂತ್ರಿ ಆಗಲಿದ್ದೇನೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಈಗಾಗಲೇ ರಾಜ್ಯಾದ್ಯಂತ 73ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ 15 ರಿಂದ 18 ಗಂಟೆಗಳ ಕಾಲ ನಿರಂತರ ಪಂಚರತ್ನ ಯಾತ್ರೆ ಮೂಲಕ ಪ್ರಚಾರ ನಡೆಸಲಾಗುತ್ತಿದೆ ಎಂದರು.
ಜೆಡಿಎಸ್ ಬರೋದು ಪಕ್ಕಾ: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದೇ ಬರಲಿದ್ದು, 120 ಕ್ಕೂ ಹೆಚ್ಚು ಸ್ಥಾನ ಗೆಲ್ಲಲೇಬೇಕೆಂಬ ಗುರಿ ಇದೆ. ನನಗೆ ಈಗಾಗಲೇ ಎರಡು ಬಾರಿ ಹೃದಯ ಬೈಪಾಸ್ ಸರ್ಜರಿ ಆಗಿದೆ. ಪಂಚಯಾತ್ರೆ ಪ್ರಾರಂಭದ ದಿನದಿಂದಲೂ ಮಾಂಸಾಹಾರ ತಿನ್ನುವುದನ್ನು ಬಿಟ್ಟಿದ್ದೇನೆ. ಈಗಾಗಲೇ 75 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಓಡಾಡಿದ್ದೇನೆ. ನಾನು ಹೋದ ಕಡೆ ಸಾವಿರಾರು ಸಂಖ್ಯೆಯಲ್ಲಿ ಜನ ನನ್ನ ಬಳಿ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿಸಿದರು.
ಸಿಪಿವೈ ವಿರುದ್ಧ ವಾಗ್ದಾಳಿ: ಕ್ಷೇತ್ರದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಳೆದ 20 ವರ್ಷಗಳ ಕಾಲ ಶಾಸಕರಾಗಿದ್ದರು. ಅವರು ಕ್ಷೇತ್ರದಲ್ಲಿ ಒಳ್ಳೆಯ ಕಲಸ ಮಾಡಿದ್ರೆ ಈಗ ಸೀರೆ ಹಂಚುವ ಅವಶ್ಯಕತೆ ಇಲ್ಲ. ನಮ್ಮ ಕ್ಷೇತ್ರದ ಜನತೆ ಒಂದು ಸೀರೆಗಾಗಿ ತಮ್ಮ ಮತವನ್ನು ಮಾರಿಕೊಳ್ಳುವುದಿಲ್ಲ. ನಮ್ಮ ಜನರು ಸ್ವಾಭಿಮಾನಿಗಳು. ಇಗ್ಗಲೂರಿನಲ್ಲಿ ದೇವೇಗೌಡರು ಡ್ಯಾಂ ಕಟ್ಟದಿದ್ದರೆ ಕ್ಷೇತ್ರಕ್ಕೆ ಎಲ್ಲಿ ನೀರಾವರಿ ಮಾಡಲು ಸಾಧ್ಯವಾಗುತ್ತಿತ್ತು. ಈಗ ಕ್ಷೇತ್ರದಲ್ಲಿ ನೀರಾವರಿ ಹರಿಕಾರ, ಭಗೀರಥ ಅಂತಾ ಎಂದು ಬರೆದುಕೊಂಡಿದ್ದಾರೆ. ಈಗ ಸತ್ತೆಗಾಲ ಯೋಜನೆ ರೂಪಿಸಿ, ಇಡೀ ಜಿಲ್ಲೆಗೆ ಶಾಶ್ವತವಾಗಿ ನೀರಾವರಿ ಹಾಗೂ ಕುಡಿಯುವ ನೀರು ಯೋಜನೆ ರೂಪಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಸ್ತುತ ಸ್ವಾಭಿಮಾನದ ಹೆಸರಿನಲ್ಲಿ ಮಾಜಿ ಸಚಿವರು ನಡಿಗೆ ಆರಂಭಿಸಿದ್ದಾರೆ. ಅವರಿಗೆ ಸ್ವಾಭಿಮಾನ ಇಲ್ಲ, ನಡಿಗೆ ಬೇರೆ ಎಂದು ಲೇವಡಿ ಮಾಡಿದ ಹೆಚ್ಡಿಕೆ, ನಾನು ಕೂಡ ಚನ್ನಪಟ್ಟಣದಲ್ಲಿ ನಿಲ್ಲಬೇಕು ಅಂತ ಬರಲಿಲ್ಲ. ಅಂದು ನನ್ನ ಕಾರ್ಯಕರ್ತರು ಬಲವಂತವಾಗಿ ನಾವೇ ಚುನಾವಣೆ ಮಾಡುತ್ತೇವೆಂದು ಹೇಳಿದಾಗ ನಾನು ಇಲ್ಲಿ ಚುನಾವಣೆಗೆ ನಿಂತಿರುವೆ. ಅದನ್ನು ಬಿಟ್ಟು ನಾನು ಎಂದಿಗೂ ಕೂಡ ಈ ಕ್ಷೇತ್ರದಲ್ಲಿ ನಿಲ್ಲುವ ಆಸೆಯನ್ನು ಇಟ್ಟುಕೊಂಡಿರಲಿಲ್ಲ ಎಂದರು.