ರಾಮನಗರ:ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಯಲ್ಲಿ ಅಕ್ರಮ ಮಾಡಲು ಖಾಸಗಿ ಸಂಸ್ಥೆಗೆ ಗುತ್ತಿಗೆ ಕೊಟ್ಟಿದ್ದಾರೆ. ಇದು ಮಂತ್ರಿಗಳ ಬೇನಾಮಿ ಹೆಸರಿನಲ್ಲಿ ಇರುವ ಕಂಪನಿ ಎಂದು ಪರೋಕ್ಷವಾಗಿ ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಚನ್ನಪಟ್ಟಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬಿಜೆಪಿ ಅಕ್ರಮ ಎಸಗಿದೆ ಎಂದು ಇವತ್ತು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆದರೆ, ಈ ಹಿಂದೆ ಕಾಂಗ್ರೆಸ್ಸಿಗರು ಮಾಡಿದ ಕೆಲಸವನ್ನು ಇಂದು ಬಿಜೆಪಿಯವರು ಮಾಡುತ್ತಿದ್ದಾರೆ. ಇದರ ಬಗ್ಗೆ ನಾನು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕೆಂದು ಹೇಳಿದರು.
ಇದನ್ನೂ ಓದಿ:ಸರ್ಕಾರಿ ಅಧಿಕಾರಿಗಳ ಗುರುತಿನ ಚೀಟಿ ನೀಡಿ ಮತದಾರರ ಮಾಹಿತಿ ಕಳ್ಳತನ: ಸಿದ್ದರಾಮಯ್ಯ
ಇದೇ ವೇಳೆ ಬೇನಾಮಿ ಹೆಸರಿನಲ್ಲಿ ಮಲ್ಲೇಶ್ವರಂನಲ್ಲಿ ಇರುವ ಕಂಪನಿ ಅದು. ಈ ಹಿಂದೆಯೂ ಬಿಬಿಎಂಪಿಯಲ್ಲಿ ಅಕ್ರಮ ನಡೆದಿತ್ತು. ಅದಕ್ಕೆ ಸಂಬಂಧಿಸಿದ ಕಡತಗಳಿಗೆ ಇದೇ ಕಂಪನಿ ರಾತ್ರೋರಾತ್ರಿ ಬೆಂಕಿ ಇಟ್ಟಿತ್ತು. ಈ ಮೊದಲು ಕಾಂಗ್ರೆಸ್‍ನವರು ಇಂತಹ ಹಲವು ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆ. ಇವಿಎಂ ಇರುವವರೆಗೆ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ಅಕ್ರಮದ ರೀತಿಯಲ್ಲೇ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಪ್ರಯತ್ನಿಸುತ್ತಿದೆ ಆರೋಪಿಸಿದರು.
ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ನಾನು ಮೃದುವಾಗಿಲ್ಲ. ಬಿಜೆಪಿ ಎಷ್ಟೇ ಕುತಂತ್ರ ಮಾಡಿದರೂ ಅಧಿಕಾರಕ್ಕೆ ಬರಲು ಆಗುವುದಿಲ್ಲ. ಮುಂದೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಆಗ ಅಕ್ರಮ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಈ ಹಿಂದೆ ಕಾಂಗ್ರೆಸ್ ಮಾಡಿದ್ದನ್ನೇ ಬಿಜೆಪಿ ಮಾಡುತ್ತಿದೆ... ಸಚಿವರ ಬೇನಾಮಿ ಹೆಸರಿನಲ್ಲಿ ಆ ಕಂಪನಿ ಇದೆ: ಹೆಚ್‌ಡಿಕೆ ಸಿದ್ದರಾಮಯ್ಯರನ್ನು ಗೆಲ್ಲಿಸಿದ್ದೇನೆ ಎಂದು ಹೇಳಿಲ್ಲ:ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೆಚ್‌ಡಿಕೆ, ಈ ಹಿಂದೆ ಸಿದ್ದರಾಮಯ್ಯ ನನ್ನಿಂದ ಗೆದ್ದದ್ದಿರು ಎಂದು ನಾನು ಹೇಳಿರಲಿಲ್ಲ. ಎರಡು ಬಾರಿ ನಾನು ತೆಗೆದುಕೊಂಡ ನಿರ್ಣಯ ತಪ್ಪಾಗಿದೆ. ರಾಜಕೀಯವಾಗಿ ತೆಗೆದುಕೊಂಡ ನಿರ್ಧಾರ ತಪ್ಪಾಗಿದೆ ಎಂದಿದ್ದೇನೆ. ನಾನು ಅವರನ್ನು ಗೆಲ್ಲಿಸಿದ್ದೇನೆ ಎಂದು ಹೇಳಿಲ್ಲ ಎಂದರು.
ಎರಡು ಬಾರಿ ಚುನಾವಣೆ ಪ್ರಕ್ರಿಯೆಯಲ್ಲಿ ತಪ್ಪು ಮಾಡಿಕೊಂಡೆ. ಇದರಿಂದಾಗಿ ಸಿದ್ದರಾಮಯ್ಯ ಅವರಿಗೆ ಅನುಕೂಲ ಆಯ್ತು ಅಂದಿದ್ದೇನೆ. ನಾನು ಅವರಿಗೆ ರಾಜಕೀಯ ಜನ್ಮ ಕೊಟ್ಟೆ ಅಂತೇಳಿ ಹೇಳಿದ್ದೀನಾ?. ಇಲ್ಲ, ಅವರನ್ನು ರಾಜಕೀಯವಾಗಿ ಮುಗಿಸಿಬಿಡುವೆ ಎಂದು ಹೇಳಿಕೆ ಕೊಟ್ಟಿದ್ದೇನಾ?. ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದವರು. ಸ್ಪರ್ಧೆ ಮಾಡಲು ಅವರಿಗೆ ಬೇಕಾದಷ್ಟು ಸ್ಥಳಗಳಿವೆ. ಚುನಾವಣೆಗೆ ನಿಲ್ಲಲು ಗೊಂದಲ ಏಕೆ ಮಾಡಿಕೊಂಡಿದ್ದಾರೆ. ಒಂದು ಕ್ಷೇತ್ರವನ್ನ ಘೋಷಣೆ ಮಾಡಲಿ ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನು ಎಂದು ಹೆಚ್‌ಡಿಕೆ ಪ್ರಶ್ನಿಸಿದರು.
ಚನ್ನಪಟ್ಟಣದಲ್ಲಿ ಆಶ್ರಯ ಮನೆ ವಿಚಾರ:ಚನ್ನಪಟ್ಟಣಕ್ಕೆ 3 ಸಾವಿರ ಮನೆಗಳ ಮಂಜೂರು ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಈ ವಿಚಾರವಾಗಿ ನಾನು ಕೂಡ ಪತ್ರ ಬರೆದಿರುವುದು ನಿಜ. ನನ್ನ ಪತ್ರಕ್ಕೆ ಸಚಿವ ಸೋಮಣ್ಣ ಯಾವ ರೀತಿ ಸ್ಪಂದಿಸಿದ್ದರು, ಅನ್ನೋದು ಗೊತ್ತು. ಅದಕ್ಕೆ ಅಲ್ವೆ ಅವರನ್ನ ಸುಳ್ಳಿನ ಸೋಮಣ್ಣ ಅನ್ನೋದು ಎಂದು ಕಿಡಿಕಾರಿದರು.
ಕೇವಲ ಚುನಾವಣೆಗೋಸ್ಕರ 3 ಸಾವಿರ ಮನೆ ಮಂಜೂರು ಮಾಡಿದ್ದೀವಿ ಅಂತ ಆದೇಶ ಮಾಡಿದ್ದಾರೆ. ಈ 3 ಸಾವಿರ ಮನೆ ನಿರ್ಮಾಣಕ್ಕೆ 50ರಿಂದ 60 ಕೋಟಿ ಹಣ ಬೇಕು. ಬರೀ ಚುನಾವಣೆಗಾಗಿ ಘೋಷಣೆ ಮಾಡಿದ್ದಾರೋ ಅಥವಾ ಹಣ ಬಿಡುಗಡೆ ಮಾಡ್ತಾರೋ ನೋಡೋಣ ಎಂದರು.
ಈ ಹಿಂದೆ 2013ರಲ್ಲೂ ಹೀಗೆ ಮನೆ, ಸೈಟ್ ಕೊಡುತ್ತೇವೆ ಅಂತ ಡ್ರಾಮ ಮಾಡಿದ್ದರು. ಗೋಲ್ಡನ್ ಎಂಬ್ಲಮ್ ಮಾಡಿಕೊಂಡು ಮನೆ ಮನೆಗೆ ಹಂಚಿದ್ದರು. ಇದೆಲ್ಲಾ ಅಂತಿಮವಾಗಿ ನನ್ನ ಮುಂದೆಯೇ ಬರಬೇಕು. ಕ್ಷೇತ್ರದಲ್ಲಿ ಹೆಚ್ಚು ಜೆಡಿಎಸ್ ಗ್ರಾಮ ಪಂಚಾಯತ್ಗಳಿವೆ. ಎಲ್ಲವನ್ನೂ ಮುಂದೆ ನೋಡೋಣ. ಮುಂದಿನ 6 ತಿಂಗಳುಗಳ ಕಾಲ ಈ ರೀತಿಯ ಪತ್ರದ ಮೂಲಕ ಯೋಜನೆ ಬರುತ್ತವೆ. ಆದರೆ, ಎಷ್ಟು ಕಾರ್ಯಗತವಾಗುತ್ತವೆ ಅನ್ನೋದನ್ನು, ನೋಡೋಣ ಎಂದು ಸಿ ಪಿ ಯೋಗೇಶ್ವರ ಹೆಸರು ಪ್ರಸ್ತಾಪ ಮಾಡದೇ ಹೆಚ್‌ಡಿಕೆ ಟಾಂಗ್ ಕೊಟ್ಟರು.
ಇದನ್ನೂ ಓದಿ:ಕಾಂಗ್ರೆಸ್ ಆಡಳಿತದಲ್ಲಿ ಇಡೀ ಕರ್ನಾಟಕದ ಮಾಹಿತಿಯನ್ನು ಬಳಸಿಕೊಂಡಿದ್ದಾರೆ: ಸಿಎಂ ಬೊಮ್ಮಾಯಿ