ರಾಮನಗರ:ಜಮೀರ್ ವಿರುದ್ಧ ಒಕ್ಕಲಿಗರ ಆಕ್ರೋಶ ವಿಚಾರಕ್ಕೆ ಸಂಬಂಧಿಸಿದಂತೆ ಜನ ತೀರ್ಮಾನ ಮಾಡುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ,
ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ. ಅವರ ಬಗ್ಗೆ ಚರ್ಚೆ ಬೇಡ ಎಂದು ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ತಿಳಿಸಿದರು.
ರಾಮನಗರ ತಾಲೂಕಿನ ಕೂಟಗಲ್ ಗ್ರಾಮದಲ್ಲಿ ಮಾತನಾಡಿದ ಅವರು, ಜಮೀರ್ ಹೇಳಿಕೆಯನ್ನ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಕಾಲವೇ ಉತ್ತರ ನೀಡಲಿದೆ. ಹಾಗೆಯೇ, ಡಿ. ಕೆ ಶಿವಕುಮಾರ್ ಸಿಎಂ ಆದರೆ ನನ್ನದೇನೂ ತಕರಾರು ಇಲ್ಲ ಎಂದು ಜೆಡಿಎಸ್ ನಾಯಕ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರ ಬಗ್ಗೆ ಒಲವು ತೋರಿಸುವುದು ಅವರಿಗೆ ಸೇರಿದ್ದು, ಅದರ ಬಗ್ಗೆ ಬಹಳ ಮಹತ್ವ ಕೊಡುವುದು ಬೇಡ. ಇತ್ತೀಚಿಗೆ ಡಿಕೆ ಶಿವಕುಮಾರ್ ಮೇಲೆ ಪ್ರೀತಿ, ಮೋಹ ಬಂದಿರಬಹುದು ಎಂದರು.
ಹಾಗೆಯೇ, ಇಡಿಯಿಂದ ಸೋನಿಯಾಗಾಂಧಿ ವಿಚಾರಣೆ ವಿಚಾರವಾಗಿ ಮಾತನಾಡಿದ ಅವರು, ಇದೇ ವಿಚಾರವಾಗಿ ಕಾಂಗ್ರೆಸ್ನವರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರ ವಿರೋಧಿಗಳನ್ನ ಮಟ್ಟ ಹಾಕಲು ಕೆಲವು ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಆದರೆ, ಇಂತಹ ವಿಚಾರದಲ್ಲಿ ರಸ್ತೆಗೆ ಇಳಿದು ಜನರಿಗೆ ತೊಂದರೆ ಕೊಡುವುದು ಅನವಶ್ಯಕವಾಗಿದೆ ಎಂದರು.
ನಾಯಕರು ಅರ್ಥ ಮಾಡಿಕೊಳ್ಳಬೇಕು :ಬಿಜೆಪಿ ಸರ್ಕಾರ ಜನರಿಗೆ ಎರಡು ಹೊತ್ತು ಗೌರವಯುತವಾಗಿ ಬದುಕುವ ಶಕ್ತಿ ತುಂಬಲಿಲ್ಲ. ಇದರ ಬಗ್ಗೆ ಗಮನಕೊಡಲಿಲ್ಲ. ಆದರೆ, ಅವರಿಗೆ ಹತ್ತಿರದವರಿಗೆ ದಿನಕ್ಕೆ 1300 ಕೋಟಿ ಆದಾಯ ಸಂಪಾದಿಸುವ ಶಕ್ತಿ ತುಂಬಿದ್ದಾರೆ. ಈ ರೀತಿಯ ವಿಚಾರಗಳಿಗೆ ದಾಖಲೆ ಇಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡಬೇಕು. ಅದನ್ನು ಬಿಟ್ಟು ನಿತ್ಯ ಹೋರಾಟ ಮಾಡುವುದರಿಂದ ಜನಸಾಮಾನ್ಯರಿಗೆ ಆಗುವ ಸಮಸ್ಯೆ ಬಗ್ಗೆ ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.