ಕರ್ನಾಟಕ

karnataka

ETV Bharat / state

ಡಿಸಿಎಂ ಶಿವಕುಮಾರ್​ಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ: ಕುಮಾರಸ್ವಾಮಿ - ಈಟಿವಿ ಭಾರತ ಕನ್ನಡ

ಡಿಸಿಎಂ ಮತ್ತು ಸಿಎಂ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ರಾಮನಗರದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್​ಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ
ಡಿಸಿಎಂ ಡಿ ಕೆ ಶಿವಕುಮಾರ್​ಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ

By ETV Bharat Karnataka Team

Published : Nov 30, 2023, 10:49 PM IST

ರಾಮನಗರ:ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ. ಸ್ವಲ್ಪ ದಿನ ಇದನ್ನು ಮುಂದಕ್ಕೆ ಎಳೆಯಬೇಕಲ್ಲವೇ. ಬಹುಶಃ ಗ್ಯಾರಂಟಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದುಬಿಡುತ್ತೇವೆ, ಬಳಿಕ ಎಲ್ಲ ಕೇಸ್​ಗಳನ್ನು ಮುಚ್ಚಿಹಾಕಬಹುದು ಎಂದು ಐದಾರು ತಿಂಗಳು ಮುಂದೂಡಿದ್ದಾರೆ. ಇದೆಲ್ಲಾ ತಂತ್ರಗಾರಿಕೆಯಷ್ಟೇ. ಅದು ಮುಂದೆ ಏನೇನಾಗುತ್ತದೆ ನೋಡೋಣ ಎಂದು ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನಾನು ವಕೀಲನಾಗಿರುವುದಕ್ಕೆ ಕೇಸ್ ವಾಪಸ್​ ತೆಗೆದುಕೊಂಡಿದ್ದು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ದೊಡ್ಡ ವಕೀಲರು ಎಂದು ಗೊತ್ತು. ಇವರೊಬ್ಬರೇ ಕಾನೂನು ತಿಳಿದುಕೊಂಡಿದ್ದಾರಲ್ಲವೇ. ಅದಕ್ಕೆ ಅರ್ಕಾವತಿ ಡಿನೋಟಿಫಿಕೇಶನ್ ತೆಗೆದು ರಿಡೋ ಮಾಡಿದರು, ಕೆಂಪಣ್ಣ ಆಯೋಗ ಮಾಡಿ ಉಳಿದುಕೊಂಡರಲ್ಲ ಆ ರೀತಿಯ ವಕೀಲರು ಇವರು. ಜನಸಾಮಾನ್ಯರಿಗೆ ಒಂದು ನ್ಯಾಯ, ಇವರಿಗೊಂದು ನ್ಯಾಯ. ಆ ವಕೀಲಿಕೆಗೆ ಇವರು ಬುದ್ದಿವಂತರಿದ್ದಾರೆ.

ಇದಲ್ಲದೇ ಎಸಿಬಿ ರಚನೆ ಮಾಡಿ, ಇವರ ಮೇಲೆ ಬಂದ ಕೇಸ್​ಗಳನ್ನು ಮುಚ್ಚಿಹಾಕಿಕೊಂಡರು. ನಾನು ಸಿಎಂ ಆಗಿದ್ದಾಗ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಹೋರಾಟ ಮಾಡಿದ್ದೆ. ನನ್ನ ಮೇಲೆ ಇವರ ಸರ್ಕಾರದ 15 ಕೇಸ್ ಇತ್ತಲ್ಲ. ನಾನು ಆವಾಗ ಇವರ ರೀತಿ ನಡೆದುಕೊಂಡಿದ್ದೆನಾ? ಎರಡನೇ ಬಾರಿ ಸಿಎಂ ಆದಾಗ ನನ್ನ ಮೇಲಿನ ಕೇಸ್ ಮುಚ್ಚಿಹಾಕಿದ್ನಾ? ಮೆರಿಟ್ ಇದ್ದರೆ ಮಾಡಿಕೊಳ್ಳಲಿ ಎಂದು ಬಿಟ್ಟಿದ್ದೇನೆ. ಅವರಿಗೂ, ನಮಗೂ ಇರುವ ವ್ಯತ್ಯಾಸ ಅಷ್ಟೇ ಎಂದರು.

ಅತಿಥಿ ಉಪನ್ಯಾಸಕರ ಪ್ರತಿಭಟನೆ:ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಮುಷ್ಕರ ವಿಚಾರಕ್ಕೆ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಬೇಡಿಕೆ ಬಗ್ಗೆ ಸರ್ಕಾರ ಗೌರವಿಸುತ್ತಿಲ್ಲ. ಸಾಕಷ್ಟು ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯಿದೆ. ಜೊತೆಗೆ ಹಲವಾರು ಸಮಸ್ಯೆಯಿದೆ. ಹೀಗಾದರೆ ಸರ್ಕಾರಿ ಕಾಲೇಜುಗಳಿಗೆ ಪೋಷಕರು ಹೇಗೆ ಸೇರಿಸುತ್ತಾರೆ. ಸರ್ಕಾರಿ ಕಾಲೇಜುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಶಾಲಾ ಕಾಲೇಜಿನ ಮೂಲ ಸೌಕರ್ಯದ ಆದ್ಯತೆ ನೀಡುವುದು ಈ ಸರ್ಕಾರದಲ್ಲಿ ಕಾಣುತ್ತಿಲ್ಲ.

ಶಿಕ್ಷಣ ಮತ್ತು ಆರೋಗ್ಯ ಕೇಂದ್ರಕ್ಕೆ ಆದ್ಯತೆ ಈ ಸರ್ಕಾರ ನೀಡುತ್ತಿಲ್ಲ. ಇದರಿಂದ ಪೋಷಕರು ಖಾಸಗಿ ಶಾಲಾ ಕಾಲೇಜಿಗೆ ಕಳುಹಿಸುತ್ತಾರೆ. ಇದರಿಂದ ಪೋಷಕರಿಗೆ ಸಾಕಷ್ಟು ಹೊರೆಯಾಗುತ್ತಿದೆ. 10 ಸಾವಿರ ಶಿಕ್ಷಕರ ನೇಮಕ ಮಾಡಲು ಪ್ರಸ್ತಾವನೆ ಕಳುಹಿಸಿದ್ದೇವೆ ಎಂದು ಇಲಾಖೆ ಹೇಳುತ್ತಿದೆ. ಕಳೆದ 6 ತಿಂಗಳಿಂದಲೂ ಇದನ್ನೇ ಹೇಳುತ್ತಿದ್ದಾರೆ. ಇನ್ನು ಎಷ್ಟು ದಿನಬೇಕು ಎಂದು ವಾಗ್ದಾಳಿ ನಡೆಸಿದರು.

ಇನ್ನು ಐದು ಗ್ಯಾರಂಟಿ ಕೊಟ್ಟಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ನಿಮ್ಮ ಗ್ಯಾರಂಟಿ ಎಷ್ಟುದಿನ ಕೊಡುತ್ತೀರಿ..? ನಿರಂತರವಾಗಿ ಕೊಡಲು ನಿಮಗೆ ಸಾಧ್ಯನಾ? ಸರ್ಕಾರ ಮೇಲೆ ಆಗುವ ಆರ್ಥಿಕ ಹೊರೆ ಏನಾಗಿದೆ..! ಅಭಿವೃದ್ಧಿ ಕಾರ್ಯಗಳ ಮೇಲೆ ಆಗುವ ದುಷ್ಪರಿಣಾಮ ಏನು? ಆರು ತಿಂಗಳಿನಿಂದ ನೋಡುತ್ತಿದ್ದೇವೆ. ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ದಿನಾ ನೂರಾರು ಕೋಟಿ ವೆಚ್ಚದಲ್ಲಿ ಜಾಹೀರಾತು ನೀಡುತ್ತಿದ್ದೀರಿ. ಎಷ್ಟು ದಿನ ಇದನ್ನ ಹೇಳಿಕೊಂಡು ಹೋಗುತ್ತೀರಿ. ನಿಮ್ಮ ಎರಡು ಸಾವಿರದಲ್ಲಿ ಜನ ಬದುಕ ಬಹುದಾದರೆ ತುಮಕೂರಿನಲ್ಲಿ ಜನ್ಮಕೊಟ್ಟ ತಂದೆಯೇ ಮಕ್ಕಳನ್ನು ಕೊಲೆ ಮಾಡಿ ಅವರು ಆತ್ಮಹತ್ಯೆ ಮಾಡಿಕೊಂಡರು. ಆ ಕುಟುಂಬ ನಾಶವಾಯಿತು. ನಿಮ್ಮ ಎರಡು ಸಾವಿರ ರೂಪಾಯಿ ಇಂದ ಬದುಕಿಸುತ್ತೀರಾ? ಜನಗಳ ಆರ್ಥಿಕ ಬದುಕನ್ನು ಕಟ್ಟಿಕೊಳ್ಳುವ ಕಾರ್ಯಕ್ರಮಗಳನ್ನು ಸರ್ಕಾರ ಕೊಡಬೇಕು ಎಂದು ಸಲಹೆ ಕೊಟ್ಟರು.

ಹಾಗೆಯೇ ನಿಮಾನ್ಸ್​ನಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಮಗು ಸಾವು ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಿಮಾನ್ಸ್​ನಲ್ಲಿ ರೋಗಿಗಳ ಒತ್ತಡ ಜಾಸ್ತಿಯಾಗಿದೆ. ಕೇಂದ್ರ ಸರ್ಕಾರಕ್ಕೆ ಒಳಪಡುವ ಆಡಳಿತ ಮಂಡಳಿ ಇದ್ದು, ಮೂಲ ಸೌಕರ್ಯದ ಕೊರತೆ ಇದೆ. ಸರ್ಕಾರಗಳು ಕ್ರಮ ಕೈಗೊಳ್ಳದಿದ್ದಾಗ ಒತ್ತಡ ಜಾಸ್ತಿ ಇದೆ. ಸರ್ಕಾರ ಇವುಗಳನ್ನ ಸರಿಪಡಿಸಬೇಕು. ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.

ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಮುಷ್ಕರ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇದು ಜನ ಸಾಮಾನ್ಯರ ಜೀವನ್ಮರಣದ ಪ್ರಶ್ನೆಯಾಗಿದೆ. ಸಿಬ್ಬಂದಿ ಮುಷ್ಕರ ಮಾಡಿದರೆ ಜನಸಾಮಾನ್ಯರಿಗೆ ತೊಂದರೆ ಆಗುತ್ತೆ. ಈಗಾಗಲೆ ಅಲ್ಲಿನ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಸರ್ಕಾರ ತಕ್ಷಣ ಸಿಬ್ಬಂದಿಯ ಸಂಬಳ ನೀಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಇದೇ ವೇಳೆ ಆಗ್ರಹಿಸಿದರು.

ಇದನ್ನೂ ಓದಿ:ಅಧಿವೇಶನ ಮುಗಿಯೋವರೆಗೂ ಎಂಇಎಸ್ ಮುಖಂಡರನ್ನು ಗಡಿಪಾರು ಮಾಡಿ: ಕರವೇ ಆಗ್ರಹ

ABOUT THE AUTHOR

...view details