ರಾಮನಗರ : ಸರ್ಕಾರದ ಮುಂದೆ ಟನ್‌ಗಟ್ಟಲೇ ಸಮಸ್ಯೆಗಳ ಸರಮಾಲೆಯೇ ಇದೆ. ಮೊದಲು ಅವುಗಳನ್ನ ಸರಿಪಡಿಸಲಿ. ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಹೊಟ್ಟೆ ತುಂಬುತ್ತದೆಯೇ ಎಂದು ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸರ್ಕಾರದ ಮುಂದೆ ರಾಜ್ಯದಲ್ಲಿ ಬಗೆಹರಿಸುವ ಸಮಸ್ಯೆಗಳೇ ಸಾವಿರ ಸಂಖ್ಯೆಯಲ್ಲಿ ಇದ್ದಾವೆ. ಮೊದಲಿಗೆ ಆ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಹೆಚ್ಚು ಗಮನ ಹರಿಸಬೇಕಿದೆ. ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಹೊಟ್ಟೆ ತುಂಬಲಿದೆಯೇ ಎಂದು ಪ್ರಶ್ನಿಸಿದರು.
ನಾನು ಬೆಳಗ್ಗೆ ಹ್ಯಾಡ್ಸ್ ಅಂಡ್ ಕಲ್ಚರ್ ಎಂಬ ಬುಕ್ ಓದಿದೆ. ಅದರಲ್ಲಿ ಮೊದಲನೇ ಪ್ರಶ್ನೆ ಇದೇ.. ನಾನ್ಯಾರು.. ಎಲ್ಲಿಂದ ಬಂದೆ.. ಎಂಬುದಕ್ಕೆ ಉತ್ತರವಿಲ್ಲ. ಇರೋವರೆಗೂ ನಮ್ಮ ಹಣೆಬರಹ ಏನು.. ಹೋದ್ಮೇಲೆ ಏನು.. ಅನ್ನೋದು ಕೂಡ ಗೊತ್ತಿಲ್ಲ. ಯಾರಿಗೂ ಯಾವುದೂ ಕೂಡ ಶಾಶ್ವತ ಅಲ್ಲ. ಈ ಭೂಮಿ ಹೇಗೆ ಉದ್ಭವ ಆಯ್ತು ಎಂದು ನಮಗೆ ನಿಮಗೆ ಗೊತ್ತಿದೆಯೇ. ಬಿಜೆಪಿಯ ರಾಜ್ಯ-ಕೇಂದ್ರ ಸರ್ಕಾರಕ್ಕೆ ಜನರ ಸಮಸ್ಯೆ ಬಗ್ಗೆ ಅರಿವಿಲ್ಲ. ಅದನ್ನ ಬಗೆಹರಿಸುವುದು ಅವರಿಗೆ ಬೇಕಿಲ್ಲ ಎಂದರು.
ಓದಿ:ಸಂಜೆಯೊಳಗೆ ತುಮಕೂರು ಗಾಯಾಳುಗಳ ಆರೋಗ್ಯ ವಿಚಾರಿಸುವೆ: ಗೃಹ ಸಚಿವ
ಇನ್ನು ದೇಶದಲ್ಲಿ ಭಾವನಾತ್ಮಕವಾಗಿ ವಿಚಾರಗಳು ನಡೆಯುತ್ತಿವೆ. ಜನ ಸತ್ತರೇನು, ಹಸಿವಾದರೇನು, ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲದಿದ್ದರೇನು, ಅದ್ಯಾವುದರ ಬಗ್ಗೆ ಚಿಂತೆ ಇಲ್ಲ. ಅಧಿಕಾರಕ್ಕಾಗಿ ಅಮಾಯಕರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸುತ್ತಿದ್ದಾರೆ. ಅಂತಹ ವಿಚಾರಗಳು ದೊಡ್ಡದಾಗಿ ಪ್ರಚಾರ ಆಗ್ತಿದೆ.
ಇದಕ್ಕೂ ಒಂದು ಅಂತಿಮ ಇರುತ್ತದೆ. ಯಾರಿಗೂ ಶಾಶ್ವತ ಅಲ್ಲ. ರಾಜಮಹಾರಾಜರ ಕಾಲದಿಂದಲೂ ನೋಡಿದ್ದೇವೆ. ಅವುಗಳು ಉಳಿದ್ವಾ, ಇಲ್ಲತ್ತಾನೆ. ಒಂದಲ್ಲಾ ಒಂದು ದಿನ ಎಲ್ಲವೂ ನಶಿಸಿಹೋಗಿವೆ. ಇದಕ್ಕೂ ಒಂದು ಅಂತ್ಯವಿದೆ. ಆದ್ರೆ, ಕಾಯಬೇಕಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ತುಮಕೂರು ಅಪಘಾತ : ರಾಜ್ಯದಲ್ಲಿ ಇಂದು ಮೂರು ಕಡೆ ಅವಘಡಗಳಾಗಿವೆ. ತುಮಕೂರಿನ ಪಾವಗಡದಲ್ಲಿ ಕೂಡ ಖಾಸಗಿ ಬಸ್ ಅನಾಹುತವಾಗಿದ್ದು, ಆ್ಯಕ್ಸಿಡೆಂಟ್ನಲ್ಲಿ ಎಂಟತ್ತು ಮಂದಿ ಸಾವಿಗೀಡಾಗಿದ್ದಾರೆಂಬ ಸುದ್ದಿ ಇದೆ ಎಂದರು.
ಬಡವರು ಬಸ್ ಅವಘಡದಲ್ಲಿ ಸಾವಿಗೀಡಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡು ಚಿಂತಾಜನಕವಾಗಿದ್ದಾರೆ. ಸರ್ಕಾರ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಬೇಕು. ಸಾರಿಗೆ ಸಚಿವರು ಹಾಗೂ ಸರ್ಕಾರ ಮಾಹಿತಿ ಪಡೆಯಬೇಕು.