ರಾಮನಗರ: ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಗೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸ್ ಕಮಿಷನರ್ ಹಾಗೂ ಗೃಹ ಸಚಿವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬಿಸಿಯೂಟ ಯೋಜನೆ ಖಾಸಗೀಕರಣಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರೋಧ ಚನ್ನಪಟ್ಟಣದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಸಿಯೂಟದ ಯೋಜನೆ ಖಾಸಗೀಕರಣ ಮಾಡುವುದು ಯಾರೋ ನಾಲ್ಕು ಜನ ಬೇರೆಯವರು ದುಡ್ಡು ತಿನ್ನೋಕೆ ಎಂದು ಆರೋಪಿಸಿದರು. ಇದನ್ನು ಬಿಟ್ಟು ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಮಧ್ಯವರ್ತಿಗಳು ದುಡ್ಡು ತಿನ್ನೋಕೆ ಅವಕಾಶ ಮಾಡಿ ಕೊಡಬಾರದು ಎಂದರು. ಇನ್ನು ಈ ಯೋಜನೆಯ ಕುರಿತು ಮಾಹಿತಿ ಕೊಟ್ಟಿರುವವರು ಯಾರು? ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.
ಇದೇ ವೇಳೆ ಬಿಜೆಪಿಯ ವಲಸಿಗ ಶಾಸಕರಿಗೆ ಟಾಂಗ್ ನೀಡಿದ ಹೆಚ್ಡಿಕೆ, ವಲಸಿಗರು ಸಚಿವರಾಗೋದು, ಬಿಡೋದು ನನಗೆ ಸಂಬಂಧವಿಲ್ಲದ ವಿಷಯ. ಎಲ್ಲರೂ ಸಚಿವ ಸ್ಥಾನಕ್ಕಾಗಿ ಜಿದ್ದಿಗೆ ಬಿದ್ದಿದ್ದಾರೆ, ಪಾಪ ಅವರ ಹಣೆಬರಹ ಎಂದು ವ್ಯಂಗ್ಯವಾಡಿದರು.
ಇನ್ನು ಕೇಂದ್ರದಿಂದ ಕರ್ನಾಟಕದ ತೆರಿಗೆ ಪಾಲು ಕಡಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಜ್ಯವನ್ನ ದೇವರು ಕಾಪಾಡಬೇಕು. ಈ ಬಾರಿ ರಾಜ್ಯಕ್ಕೆ 9 ರಿಂದ 11 ಸಾವಿರ ಕೋಟಿ ಖೋತಾ ಮಾಡಿದ್ದಾರೆ. ಕಳೆದ ವರ್ಷ 30 ಸಾವಿರ ಕೋಟಿ ಯೋಜನೆಗಳ ಅನುದಾನವನ್ನ ಕಡಿತ ಮಾಡಿದ್ದಾರೆ. ಈ ಸರ್ಕಾರದಲ್ಲಿ ಸಚಿವ ಮಂಡಲ ರಚನೆ ಮಾಡೋದು ದುಸ್ಸಾಹಸವಾಗಿದೆ. ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ರೈತರಿಗೆ, ಯುವಕರಿಗೆ ಯಾವ ನಿರೀಕ್ಷೆಯೂ ಇಲ್ಲವೆಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರ ನಡೆಸಲು ಬಂದಿದ್ದಾಗ ಜೆಡಿಎಸ್ ಪಕ್ಷ ಕುಸಿಯುತ್ತಿರುವ ಗುಡ್ಡ ಎಂದಿದ್ದ ಪುಟ್ಟಣ್ಣ ಹೇಳಿಕೆಗೆ ಹೆಚ್ಡಿಕೆ ಸಿಡಿಮಿಡಿಗೊಂಡರು. ನಂತರ ಅವರ ಮಾತಿಗೆ ನಾನು ಉತ್ತರ ಕೊಡುವುದಿಲ್ಲ. ನಾನು ಯಾಕೆ ತಲೆಕೆಡಿಸಿಕೊಳ್ಳಲಿ. ಬನ್ನಿ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಕೊಡೋಣ ಎಂದು ಪುಟ್ಟಣ್ಣ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕುಟುಕಿದರು.