ರಾಮನಗರ: ರಾಜ್ಯ ವಿಧಾನಸಭೆ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಕುಂಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು. ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಜೊತೆ ಪತ್ನಿ ಹಾಗು ರಾಮನಗರ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಅನಿತಾ ಕುಮಾರಸ್ವಾಮಿ, ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಗ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ನಿಖಿಲ್ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.
ಹಾಸನಲದಲ್ಲಿ ಪೂಜೆ ಸಲ್ಲಿಸಿದ ಹೆಚ್ ಡಿ ರೇವಣ್ಣ ಕುಟುಂಬ: ಜೆಡಿಎಸ್ ಅಭ್ಯರ್ಥಿ ಎಚ್.ಡಿ.ರೇವಣ್ಣ ತಮ್ಮ ಕುಟುಂಬ ಸಮೇತ ಹಾಸನ ಜಿಲ್ಲೆಯ ಹೊಳೆನರಸೀಪುರದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಮತದಾನ ಮಾಡಿ ನಂತರ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ನಾಡಿನ ಜನತೆ ಮತದಾನ ಮಾಡುವುದರಲ್ಲಿ ಹಿಂದೆ ಸರಿಯಬೇಡಿ ಎಂದು ಮನವಿ ಮಾಡುತ್ತೇನೆ ಎಂದರು. ಮುಂದೆ ಮಗ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಇವತ್ತು ರಾಜಕೀಯದ ವ್ಯವಸ್ಥೆಯನ್ನು ನೋಡಿದಾಗ, ಚುನಾವಣೆ ದುಡ್ಡಿನ ಬಲದ ಮೇಲೆ ನಿಂತಿರುವಂಥದ್ದು. ಇವೆಲ್ಲ ವಿಚಾರಗಳು ನನ್ನಂತಹ ಯುವಕರಲ್ಲಿ ನೋವು ತಂದಿರುವಂಥದ್ದು. ಯಾರು ನಿಜಕ್ಕೂ ಅವಕಾಶ ಸಿಕ್ಕಂತಹ ಸಂದರ್ಭದಲ್ಲಿ ಸೇವೆ ಮಾಡಲು ಕ್ಷೇತ್ರದ ಜನರೊಟ್ಟಿಗೆ ನಿಂತಿದ್ದಾರೆ ಎಂದು ನೋಡಿ ಜನ ಸಾಮಾನ್ಯರು ಮತ ಹಾಕಬೇಕು. ಮುಂದಿನ ದಿನಗಳಲ್ಲಿ ಇದಕ್ಕೆ ದೊಡ್ಡ ಮಟ್ಟದಲ್ಲಿ ಬದಲಾವಣೆಯನ್ನು ಕರ್ನಾಟಕದ ರಾಜ್ಯದ ಜನತೆ ತರಲಿ ಎಂದು ಆಶಿಸುತ್ತೇನೆ ಎಂದರು.