ರಾಮನಗರ:ರಾಜ್ಯದ ಕೋವಿಡ್ ಸ್ಥಿತಿಗತಿ ಮತ್ತು ಜೆಡಿಎಸ್ ವತಿಯಿಂದ ಜನರಿಗೆ ನೀಡಲಾಗುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪಕ್ಷದ ಶಾಸಕರು, ಮುಖಂಡರೊಂದಿಗೆ ಆನ್‌ಲೈನ್ ಸಮಾಲೋಚನೆ ನಡೆಸಿದರು.
ಕೊರೊನಾ ಸೋಂಕು ಪತ್ತೆ ಪರೀಕ್ಷೆ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿರುವುದು, ಪರೀಕ್ಷಾ ವರದಿಗಳು ವಿಳಂಬವಾಗಿ ಬರುತ್ತಿರುವುದು ಮತ್ತು ವರದಿ ವಿಳಂಬವಾಗುತ್ತಿರುವುದರಿಂದ ಆಗುತ್ತಿರುವ ಅನಾಹುತಗಳು ಬಗ್ಗೆ ಮಾಹಿತಿ ಪಡೆದರು. ಬಿಡದಿಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಯ ಶಾಸಕರು, ಮುಖಂಡರೊಂದಿಗೆ ಎಚ್.ಡಿ ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಿದರು.
ಲಸಿಕೆ ಅಭಿಯಾನ ಅವ್ಯವಸ್ಥೆ, ಆಕ್ಸಿಜನ್ ಪೂರೈಕೆಯಲ್ಲಿ ಅಗುತ್ತಿರುವ ಸಮಸ್ಯೆ, ತಾರತಮ್ಯ, ಆಸ್ಪತ್ರೆಗಳು ರೋಗಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿರುವುದನ್ನು ಶಾಸಕರು ಕುಮಾರಸ್ವಾಮಿ ಅವರ ಗಮನಕ್ಕೆ ತಂದರು. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ಹಳ್ಳಿಗಳಲ್ಲಿ ಸೋಂಕಿಗೆ ಒಳಗಾಗಿರುವವರಿಗೆ ಮಾಹಿತಿ, ಜಾಗೃತಿ ನೀಡಲು ಆಶಾ ಕಾರ್ಯಕರ್ತೆಯರು ಶ್ರಮ ವಹಿಸುತ್ತಿರುವುದಾಗಿ ಶಾಸಕರು ಮಾಹಿತಿ ನೀಡಿದರು. ಆಶಾ ಕಾರ್ಯಕರ್ತರ ಕಾರ್ಯಕ್ಕೆ ಎಚ್‌ಡಿಕೆ ಹರ್ಷ ವ್ಯಕ್ತಪಡಿಸಿದರು. ಕಾರ್ಯಕರ್ತೆಯರು ಸೋಂಕಿತರಿಗೆ ಔಷಧ ತಲುಪಿಸಲು ಉತ್ಸಕರಾಗಿದ್ದರೂ, ಸರ್ಕಾರ ಔಷಧ ಪೂರೈಸದೇ ಇರುವುದನ್ನು ಶಾಸಕ ಅಶ್ವಿನ್ ಅವರು ಸಭೆಯಲ್ಲಿ ಎಚ್‌ಡಿಕೆ ಗಮನಕ್ಕೆ ತಂದರು. ಕೋವಿಡ್ ಚಿಕಿತ್ಸೆಗೆ ನೆರವಾಗುತ್ತಿರುವ, ವೈಯಕ್ತಿಕ ಸಹಾಯ ನೀಡುತ್ತಿರುವ ಪಕ್ಷದ ಶಾಸಕರ ನಡೆಗೆ ಕುಮಾರಸ್ವಾಮಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.