ರಾಮನಗರ: ಜನತೆಯ ಆಶೀರ್ವಾದ ಇದ್ದರೆ ನಿಖಿಲ್ ಇಲ್ಲಿಂದಲೇ ಸ್ಪರ್ಧೆ ಮಾಡ್ತಾರೆ. ಮಂಡ್ಯಕ್ಕೆ ಆಕಸ್ಮಿಕವಾಗಿ ನಿಖಿಲ್ ಹೋಗಿದ್ದು, ನನಗೆ ಮತ್ತು ಕುಮಾರಸ್ವಾಮಿಗೆ ರಾಜಕೀಯ ಶಕ್ತಿ ನೀಡಿದ ಕ್ಷೇತ್ರ ಇದು. ನಮ್ಮ ಶಕ್ತಿ ಕೇಂದ್ರ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಿಖಿಲ್ ರಾಜಕೀಯ ಭವಿಷ್ಯ ನುಡಿದರು.
ಜನತೆಯ ಆಶೀರ್ವಾದ ಇದ್ದರೆ ನಿಖಿಲ್ ರಾಮನಗರದಲ್ಲೇ ಸ್ಪರ್ಧೆ ಮಾಡ್ತಾರೆ: ದೇವೇಗೌಡ
ನಿಖಿಲ್ ಮತ್ತು ರೇವತಿ ಮದುವೆ ತಯಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮೊಮ್ಮಗನ ಮದುವೆಯ ಸ್ಥಳ ವೀಕ್ಷಣೆಗೆ ಪುತ್ರ ಹೆಚ್ಡಿಕೆಯೊಂದಿಗೆ ಭೇಟಿ ನೀಡಿದ್ದರು.
ನಗರದ ಹೊರವಲಯದಲ್ಲಿ ನಿಖಿಲ್ ಮತ್ತು ರೇವತಿ ಮದುವೆ ತಯಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಮೊಮ್ಮಗನ ಮದುವೆಯ ಸ್ಥಳ ವೀಕ್ಷಣೆಗೆ ಪುತ್ರ ಹೆಚ್ಡಿಕೆಯೊಂದಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ರೇವಣ್ಣ ಹಾಸನಕ್ಕೆ ಸೀಮಿತವಾಗಿದ್ದಾರೆ. ನಾನು ಮತ್ತು ಕುಮಾರಸ್ವಾಮಿ ರಾಮನಗರಕ್ಕೆ ಇದ್ದೆವು. ಇದೀಗ ನಿಖಿಲ್ಗೆ ಜನ ಆಶೀರ್ವಾದ ಮಾಡಿದ್ರೆ ಮುಂದೆ ನಿಖಿಲ್ ಮುಂದುವರೆಯುತ್ತಾರೆ ಎಂದರು. ಸರಳವಾಗಿ ಮದುವೆ ಮಾಡಲಾಗುತ್ತಿದೆ. ಸಿನಿಮಾ ಮತ್ತು ರಾಜಕೀಯ ಸೇರಿ ಎಲ್ಲರನ್ನ ನಿಖಿಲ್ ಮದುವೆಗೆ ಕರೆಯುವ ಸದುದ್ದೇಶದಿಂದ ಇಲ್ಲಿ ಮದುವೆ ಮಾಡಲಾಗುತ್ತಿದೆ. ಪ್ರಶಾಂತ್ ಕಿಶೋರ್ ಬಳಿ ಈಗಾಗಲೇ ಕುಮಾರಸ್ವಾಮಿ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ. ಮುಂದೆ ಎಲ್ಲರೂ ಕುಳಿತು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದರು.
ಇನ್ನು ಮಧು ಬಂಗಾರಪ್ಪ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ನಾನು ಪಕ್ಷ ಕಟ್ಟೋಕೆ ಮಂಡ್ಯಕ್ಕೆ ಹೋಗ್ತೇನೆ. ಪಕ್ಷಕ್ಕೆ ಶಕ್ತಿ ಕೊಟ್ಟಿರುವ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳಿಗೆ ಹೋಗ್ತೇನೆ. ನಮಗೆ ಶಕ್ತಿ ಕೊಟ್ಟ ಕ್ಷೇತ್ರಗಳಲ್ಲಿ ನಮ್ಮ ಬಗ್ಗೆ ಕಥೆ ಕಟ್ಟಿ ಶಕ್ತಿ ಕುಂದಿಸುವ ಕಾರ್ಯ ಮಾಡಿದವರಿಗೆ ಟೈಂ ಬರುತ್ತೆ ಕಾಯಿರಿ ಎಂದರು.