ರಾಮನಗರ: ಈ ದೇಶ ಯಾರಪ್ಪನ ಆಸ್ತಿಯಲ್ಲ, ಬಿಜೆಪಿ, ವಿಶ್ವ ಹಿಂದೂ ಪರಿಷತ್ ಆಸ್ತಿಯಲ್ಲ. ಇದು ದೇಶದ ಸರ್ವಧರ್ಮಗಳ ಆಸ್ತಿ, ಬಿಜೆಪಿಯವರು ಕೇಸರಿ ಬಾವುಟ ಹಿಡಿಯುತ್ತಾರೆ, ಮುಸ್ಲಿಮರು ರಾಷ್ಟ್ರಧ್ವಜವನ್ನ ಹಿಡಿಯುತ್ತಾರೆ. ಯಾರದ್ದು ದೇಶ ಪ್ರೇಮ? ಸಿಎಎ, ಎನ್ಆರ್ಸಿ, ಎನ್ಪಿಆರ್ ಕೇವಲ ಮುಸ್ಲಿಮರಿಗೆ ಮಾತ್ರ ಅನಾನುಕೂಲವಾಗಲ್ಲ, ಎಲ್ಲರನ್ನೂ ಸಂಕಷ್ಟಕ್ಕೆ ದೂಡಲಿದೆ ಅದಕ್ಕಾಗಿಯೇ ಇದು ಎಲ್ಲಾ ಸಮಾಜಗಳ ಪ್ರತಿಭಟನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ನಗರದ ಪೆಟ್ಟಾ ಶಾಲಾ ಮೈದಾನದಲ್ಲಿ ಸಿಎಎ,ಎನ್ಆರ್ಸಿ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾದ ಅವರು. 1947 ರ ಸ್ವಾತಂತ್ರ್ಯದಲ್ಲಿ ಹಲವಾರು ಮುಸ್ಲಿಮರು ಪ್ರಾಣತೆತ್ತಿದ್ದಾರೆ, ನೆಹರು ಅವರು ನಿಧನರಾದ ಸಂದರ್ಭದಲ್ಲಿ ಈ ಅಮಿತ್ ಶಾ ಹುಟ್ಟೇ ಇರಲಿಲ್ಲ. ಆದರೆ ಅವರು ನೆಹರು ಬಗ್ಗೆ ಮಾತನಾಡ್ತಾರೆ ಎಂದು ಲೇವಡಿ ಮಾಡಿದ ಹೆಚ್ಡಿಕೆ, ದೇಶಕ್ಕೆ ಸಂಪತ್ತು ಕೊಟ್ಟಿರುವಲ್ಲಿ ಮುಸ್ಲಿಮರ ಪಾತ್ರ ಇದೆ. ಈ ದೇಶದ ಸಂವಿಧಾನವನ್ನ ಮೋದಿ, ಅಮಿತ್ ಶಾಂತಹ ನೂರು ಜನ ಬಂದ್ರೂ ತೆಗೆಯೋಕೆ ಸಾಧ್ಯವಿಲ್ಲ ಎಂದರು.