ರಾಮನಗರ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಕೈ ಎತ್ತಿ ಹಿಡಿದು ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಇದು ಒಳ್ಳೆಯದಲ್ಲವೇ?. ನನ್ನ ಕೈ ಹಿಡಿದುಕೊಂಡು ಕೈ ಎತ್ತಿರಲಿಲ್ಲವೇ?. ಕೈ ಎತ್ತೋದು ಕೈ ಇಳಿಸೋದು ಆಯಾಯ ಸಂದರ್ಭಕ್ಕೆ ತಕ್ಕಂತೆ ನಡೀತಿರುತ್ತವೆ ಎಂದು ತಿರುಗೇಟು ನೀಡಿದರು.
ಇದಕ್ಕೂ ಮುನ್ನ ರಾಮನಗರದ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯಕ್ಕೆ ಹೆಚ್‌ಡಿಕೆ ದಂಪತಿ ಬಾಗಿನ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕೈ-ಕೈ ಹಿಡಿದು ಮೇಲಕ್ಕೆ ಎತ್ತಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ನನ್ನ ಕೈಯನ್ನೂ ಮೇಲೆ ಎತ್ತಿ ಹಿಡಿದಿರಲಿಲ್ಲವೇ?. ಇದೆಲ್ಲವನ್ನೂ ನಾನು ಕೂಡಾ ಮೈತ್ರಿ ಸರ್ಕಾರ ಇದ್ದಾಗ ನೋಡಿದ್ದೇನೆ. ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರ್ಯಾರು ಬೆನ್ನಿಗೆ ಚೂರಿ ಹಾಕಿಸಿಕೊಳ್ಳುತ್ತಾರೆ ನೋಡೋಣ ಬನ್ನಿ ಎಂದರು.
ಅಮಿತ್ ಶಾ ಎಚ್ಚರಿಕೆ ವಿಚಾರ: ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮಾತ್ರ ಅಲ್ಲ. ಇಡೀ ಸರ್ಕಾರಕ್ಕೆ ಅಮಿತ್ ಶಾ ಎಚ್ಚರಿಕೆ ಕೊಡಬೇಕು. ಅಲ್ಲದೇ ರಾಜ್ಯದ ಎಲ್ಲಾ ಮಂತ್ರಿಗಳಿಗೂ ಎಚ್ಚರಿಕೆ ಕೊಡಬೇಕು ಎಂದು ಹೇಳಿದರು.