ರಾಮನಗರ: ರಾಜ್ಯದ ಜನರ ಉಸಿರಿನಲ್ಲಿ ಉಸಿರಾಗಿರುವ ಜೆಡಿಎಸ್ ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರು ಸವಾಲ್ ಹಾಕಿದ್ದಾರೆ.
ರಾಮನಗರ ಜಿಲ್ಲೆ ಬಿಡದಿಯಲ್ಲಿ ಜೆಡಿಎಸ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 2023ಕ್ಕೆ ಜಾತ್ಯಾತೀತ ಜನತಾದಳ ಹಾಗೂ ಹೆಚ್ ಡಿ ಕುಮಾರಸ್ವಾಮಿ ನಾಯಕತ್ವದ ಜನತಾ ಸರ್ಕಾರ ರಚನೆ ಮಾಡುವ ಗುರಿ ಇದೆ ಎಂದಿದ್ದಾರೆ. ಇನ್ನು, ಬಿಡದಿ ತೋಟದಲ್ಲಿ ಆರಂಭವಾದ 4 ದಿನಗಳ ಜನತಾ ಪರ್ವ 1.0 ಕಾರ್ಯಗಾರಕ್ಕೆ ದೊಡ್ಡಗೌಡ್ರು ಚಾಲನೆ ನೀಡಿದರು.
ಅಪಪ್ರಚಾರ ಮಾಡುವುದಕ್ಕೂ ಒಂದು ಮಿತಿ ಬೇಡವೇ ಎಂದ ಹೆಚ್ಡಿಡಿ ಮೂಲ ಅರಿಯಬೇಕು :ಅಪಪ್ರಚಾರ ಮಾಡುವುದಕ್ಕೂ ಒಂದು ಮಿತಿ ಬೇಡವೇ. ತಾವು ನಾಯಕರಾಗಿ ಬಂದಿದ್ದು ಎಲ್ಲಿಂದ, ಬೆಳೆದದ್ದು ಎಲ್ಲಿಂದ ಎಂಬುದನ್ನು ಅರಿತು ಮಾತನಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಅವರ ಜೊತೆ ಇವರ ಜೊತೆ ಹೋಗುವ ಪಕ್ಷ ಎಂದು ದೂರುವ ಮುನ್ನ ಸಮ್ಮಿಶ್ರ ಸರ್ಕಾರ ರಚನೆ ಮಾಡುವುದಕ್ಕೆ ಯಾರ್ಯಾರು ನಮ್ಮ ಮನೆ ಬಾಗಿಲಿಗೆ ಬಂದರು ಎನ್ನುವುದು ನನಗೆ, ನಿಮಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ-ದೇಶಕ್ಕೆ ಗೊತ್ತಿದೆ ಎಂದರು.
ತುಂಬಾ ನೋವು ನುಂಗಿದ್ದೇನೆ :ಅಪಮಾನಗಳನ್ನು ಸಹಿಸಿದ್ದೇನೆ, ಎದುರಿಸಿದ್ದೇನೆ. ಅಪಾರ ಕಾರ್ಯಕರ್ತರ ಜತೆ ನೋವುಗಳನ್ನು ನುಂಗಿದ್ದೇನೆ. ನಮ್ಮನ್ನು ನೋಡಿ ಅಪಹಾಸ್ಯ ಮಾಡುವವರಿಗೆ 2023ರಲ್ಲಿ ಉತ್ತರ ನೀಡೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.