ರಾಮನಗರ:''ನಿಮ್ಮೆಲ್ಲರಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡ್ತೇನೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದ ಅನೇಕ ಜನರು ಮನೆಗೆ ಕರೆದುಕೊಂಡು ಹೋಗಿ ಊಟ ಬಡಿಸಿದವರು ನನ್ನ ಕಣ್ಣ ಮುಂದೆ ಇಲ್ಲ. ಆ ತಾಯಂದಿರು ಈಗ ಸ್ವರ್ಗದಲ್ಲಿ ಇದ್ದಾರೆ. ಅವರು ಅನ್ನ ಹಾಕಿ ಬೆಳೆಸಿದ್ದರಿಂದ 90ರ ವಯಸ್ಸಿನಲ್ಲಿಯೂ ನಿಮ್ಮ ಮುಂದೆ ನಿಂತಿದ್ದೇನೆ. ರೈತರಿಗೋಸ್ಕರ ಬಂದಿದ್ದೇನೆ'' ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ತಮ್ಮ ಹಳೆ ನೆನಪು ಮೆಲುಕು ಹಾಕಿದರು. ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಅಭ್ಯರ್ಥಿಗಳಾದ ಹೆಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಪರ ಅವರು ಮತಯಾಚಿಸಿದರು.
''ಅರ್ಕಾವತಿ, ಇಗ್ಗಲೂರು ಜಲಾಶಯ ನಿರ್ಮಿಸಿದೆ. ಆದರೆ ಇವತ್ತು ಮೇಕೆದಾಟು ಅಣೆಕಟ್ಟೆಗೆ ಅವಕಾಶ ಕೊಡುತ್ತಿಲ್ಲ. ತಮಿಳರು ಸೇಲಂನಲ್ಲಿ ಏತನೀರಾವಾರಿ ಮುಖಾಂತರ ನೀರು ಹರಿಸಿ ಭತ್ತ ಬೆಳೆಯುತ್ತಿದ್ದಾರೆ. ನನ್ನ ರೈತರು ಕುಡಿಯವ ನೀರು ಕುಡಿಯುತ್ತಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ 18 ಜನ ಭಾರತೀಯ ಜನತಾ ಪಾರ್ಟಿಯವರು, ಅನಂತ್ ಕುಮಾರ್ಗೆ ಹೇಳಿದೆ. ನನ್ನ ಜನರಿಗೆ ನೀರಿಲ್ಲ ಅಂತ. ಅನಂತ ಕುಮಾರ್ ಬೆಳಗ್ಗೆ ಹೇಳ್ತೇನೆ ಎಂದು ಹೇಳಿ ಯಾರೂ ಕೂಡಾ ತಲೆ ಕೆಡಿಸಿಕೊಳ್ಳಲಿಲ್ಲ'' ಎಂದರು.
''ತಮಿಳರನ್ನು ಸೇರಿ ಸರ್ಕಾರ ಮಾಡಬೇಕು ಅಂತ ಎಂದರು. ಹೋರಾಟ ಮಾಡಿ ನಾನು ಜಲಾಶಯ ಕಟ್ಟಿದೆ. ವಾಜಪೇಯಿ, ಮನಮೋಹನ್ ಸಿಂಗ್, ಮೋದಿ ಯಾರು ಕೂಡ ಅಂದು ಹಣ ತಂದಿಲ್ಲ. ಸೊಪ್ಪು ಸಾರು ಮಾಡಿದ ತಾಯಂದಿರನ್ನು ನೆನೆಸಿಕೊಳ್ಳುತ್ತೇನೆ. ಅವರ ಹೆಸರು ಮರೆತೇ ಹೋಗಿದೆ. ರಾಮನಗರಕ್ಕೆ ಕೊನೆಗೆ ಬಂದಾಗ ನಿನ್ನ ನೋಡಿ ಸಾಯ್ತೇನೆ ಅಂತ ನನ್ನ ಬೆಳೆಸಿದವರು ಹೇಳುತ್ತಾರೆ'' ಎಂದು ಭಾಷಣದ ವೇಳೆ ದೇವೇಗೌಡರು ಗದ್ಗದಿತರಾದರು.