ರಾಮನಗರ: ಸರ್ಕಾರ ತಡೆ ಹಿಡಿದಿರುವ 12 ತಿಂಗಳ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಭವನದ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಹಾಗೂ ರಾಮನಗರ ಜಿಲ್ಲಾ ಘಟಕ ಮತ್ತು ಸಿಐಟಿಯು ಸದಸ್ಯರು ಒಗ್ಗೂಡಿ ಸುಮಾರು 12 ಹಕ್ಕೊತ್ತಾಯಗಳೊಂದಿಗೆ ಪ್ರತಿಭಟನೆ ನಡೆಸಿ, ಜಿಲ್ಲಾ ಪಂಚಾಯತಿ ಸಿಇಒ ವಿಕ್ರಮ್ರವರಿಗೆ ಈ ಕೂಡಲೇ ವೇತನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯತಿ ನೌಕರರ ಪ್ರತಿಭಟನೆ ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಪ್ರಾಣದ ಹಂಗು ತೊರೆದು ಹಳ್ಳಿಗಳಲ್ಲಿ ಸೋಂಕು ಹರಡದಂತೆ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರ 12 ತಿಂಗಳ ವೇತನ ನೀಡಿಲ್ಲ. ಇದೂವರೆಗೆ ಸುಮಾರು 382 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡು ಸರ್ಕಾರ ನಮಗೆ ಮೋಸ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಕೂಡಲೇ ಸರ್ಕಾರ ನಮ್ಮ ಎಲ್ಲಾ ಬೇಡಿಕೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.