ರಾಮನಗರ : ಬೆಂಗಳೂರು – ಮೈಸೂರು ನೂತನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಯೋಗಿಕ ಜಿಪಿಎಸ್ ಟೋಲ್ ಸಂಗ್ರಹಕ್ಕೆ ಚಾಲನೆ ನೀಡಲು ಕೇಂದ್ರ ಹೆದ್ದಾರಿ ಸಚಿವಾಲಯ ಸಿದ್ಧತೆ ನಡೆಸಿದೆ. ಜಿಪಿಎಸ್ ಆಧರಿಸಿ ಹೆದ್ದಾರಿಯಲ್ಲಿ ವಾಹನ ಕ್ರಮಿಸಿದ ದೂರಕ್ಕೆ ಮಾತ್ರ ಟೋಲ್ ಸಂಗ್ರಹಿಸುವ ವ್ಯವಸ್ಥೆಯನ್ನು ಬೆಂಗಳೂರು – ಮೈಸೂರು ನಡುವಿನ ನೂತನ ಹೆದ್ದಾರಿಯಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.
ಇದರ ಜೊತೆಗೆ ದೆಹಲಿ – ಜೈಪುರ ಹೆದ್ದಾರಿಯಲ್ಲಿ ಜಾರಿಗೆ ತರಲು ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಈ ಸಂಬಂಧ ವಾಹನ ಎಷ್ಟು ದೂರು ಚಲಿಸುತ್ತದೋ ಅಷ್ಟು ದೂರಕ್ಕೆ ಟೋಲ್ ಸಂಗ್ರಹಿಸುವ ಜಿಯೋ ಫೆನ್ಸಿಂಗ್ ಕೆಲಸವೂ ಸಹ ಆರಂಭವಾಗಿದೆ.
ಕಳೆದ ಕೆಲವು ತಿಂಗಳ ಹಿಂದೆಯೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ದೇಶದಲ್ಲಿ ಈಗಾಗಲೇ ಸುಮಾರು 18 ಲಕ್ಷ ವಾಣಿಜ್ಯ ಬಳಕೆ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಆರಂಭದಲ್ಲಿ ಈ ವಾಹನಗಳು ಮಾತ್ರ ಜಿಪಿಎಸ್ ಟೋಲ್ ಸಂಗ್ರಹ ವ್ಯವಸ್ಥೆ ಅಡಿಗೆ ಬರಲಿವೆ. ಈ ಪ್ರಯೋಗ ಯಶಸ್ವಿ ಆದರೆ ಉಳಿದ ಇತರೆ ವಾಹನಗಳು ಹಾಗೂ ಹೆದ್ದಾರಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಬಹಳಷ್ಟು ಸವಾರರು ಮಂಡ್ಯ ಸೇರಿದಂತೆ ಇತರೆಡೆ ಪ್ರಯಾಣ ಸೀಮಿತಗೊಳಿಸಿದರೂ ಪೂರ್ಣ ಹಣ ಪಾವತಿ ಮಾಡಬೇಕಿತ್ತು. ನಾವು ಕ್ರಮಿಸುವ 50 ಕಿಲೋ ಮಿಟರ್ಗೆ ಬೆಂಗಳೂರಿಗೆ ಹೋಗುವಷ್ಟು ಟೋಲ್ ಹಣ ಪಾವತಿಸಬೇಕೇ ಎಂದು ವಾಹನ ಸವಾರರು ಬೇಸರಿಸುತ್ತಿದ್ದರು. ಜಿಪಿಎಸ್ ಅಳವಡಿಸುವುದರಿಂದ ವಾಹನ ಸವಾರರಿಗೆ ಅನುಕೂಲವಾಗಲಿದ್ದು, ಅವರು ಎಷ್ಟು ಕಿ.ಮೀ. ಸಂಚರಿಸುತ್ತಾರೋ ಅಷ್ಟು ಪ್ರಮಾಣದ ಹಣ ಅವರ ಖಾತೆಯಿಂದ ಕಡಿತವಾಗಲಿದೆ. ಈ ನೂತನ ವ್ಯವಸ್ಥೆ ಜಾರಿಗೊಳಿಸುವುದರಿಂದ ವಾಹನ ಸವಾರಿಗೆ ತುಂಬಾ ಅನುಕೂಲವಾಗಲಿದೆ.
ಇದನ್ನೂ ಓದಿ :ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾದ ಸರ್ಕಾರ: ದರಖಾಸ್ತು ಪೋಡಿ ನಿಯಮದಲ್ಲೇನಿದೆ?