ಕರ್ನಾಟಕ

karnataka

ETV Bharat / state

ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಳು ದಿನಗಳ ಕಾಲ ತಂತ್ರಭಾಗ ಶತಚಂಡಿಕಾ ಮಹಾಯಾಗ.. - ತಾಯಿ ಚಾಮುಂಡೇಶ್ವರಿ ಪಂಚಲೋಹದ ವಿಗ್ರಹ

ಭೀಮನ ಅಮಾವಾಸ್ಯೆ ಪ್ರಯುಕ್ತ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯ ಕ್ಷೇತ್ರದಲ್ಲಿ ಇಂದಿನಿಂದ 7 ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ಮಹಾಯಾಗ ಹಮ್ಮಿಕೊಳ್ಳಲಾಗಿದೆ.

Gowdagere Sri Chamundeshwari punyakshetra
ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶತಚಂಡಿಕಾ ಮಹಾಯಾಗ

By

Published : Jul 11, 2023, 7:22 PM IST

ರಾಮನಗರ:ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯ ಕ್ಷೇತ್ರದಲ್ಲಿ ಏಳು ದಿನಗಳ ಕಾಲ ನಡೆಯಲಿರುವ ತಂತ್ರ ಭಾಗ - ಶತಚಂಡಿಕಾ ಮಹಾಯಾಗಕ್ಕೆ ಮಂಗಳವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶ್ವಶಾಂತಿ, ಲೋಕ ಕಲ್ಯಾಣ ಹಾಗೂ ಸಮಸ್ತ ಭಕ್ತರ ಸಕಲ ಸಂಕಷ್ಟ ನಿವಾರಣೆಯ ಉದ್ದೇಶದಿಂದ ಜುಲೈ 11ರಿಂದ 7 ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ಮಹಾಯಾಗ ಹಮ್ಮಿಕೊಳ್ಳಲಾಗಿದ್ದು, ಮಂಗಳವಾರ ಮೊದಲ ದಿನದ ಯಾಗ ಶ್ರದ್ಧಾಭಕ್ತಿಯಿಂದ ನೆರವೇರಿತು. ಯಾಗದ ಪ್ರಯುಕ್ತ ಕ್ಷೇತ್ರದ ಧರ್ಮದರ್ಶಿ ಡಾ‌ ಮಲ್ಲೇಶ್ ಗುರೂಜೀ ನೇತೃತ್ವದಲ್ಲಿ ಬೆಳಗಿನಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಚಾಮುಂಡೇಶ್ವರಿ ದೇವಿಗೆ ವಿಶೇಷ ಅಭಿಷೇಕ, ವಿಶೇಷ ಅಲಂಕಾರ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ಜರುಗಿದವು. ಕ್ಷೇತ್ರದಲ್ಲಿ ನೆಲೆಸಿರುವ ಪವಾಡ ಬಸವಪ್ಪನಿಗೆ ಪಾದಪೂಜೆ ಸೇರಿದಂತೆ ಯಾಗಸ್ಥಳದ ಪ್ರದಕ್ಷಿಣೆ ಹಾಕಲಾಯಿತು. ಕಡೂರು ತಾಲೂಕಿನಿಂದ ಆಗಮಿಸಿರುವ ಪ್ರಧಾನ ಅರ್ಚಕ ನವೀಶ್ ಶಾಸ್ತ್ರಿ ನೇತೃತ್ವದ ಅರ್ಚಕರ ತಂಡ ಯಾಗ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಪೂರ್ಣಕುಂಭ, ವಾಸ್ತುಹೋಮ, ರಾಕ್ಷಯಜ್ಜ, ಯಾಗಾಶಾಲ ಪ್ರವೇಶ ಸೇರಿದಂತೆ ನಾನಾ ವಿಧಿವಿಧಾನಗಳು, ನವಗ್ರಹ ಪೂಜೆ, ಬಲಿಪ್ರಧಾನ, ಸಂಕಲ್ಪಹೋಮ ಸೇರಿದಂತೆ 108 ಪ್ರಕಾರದ ಹೋಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿರುವ ವಿಶ್ವದ ಅತಿ ಎತ್ತರದ ತಾಯಿ ಚಾಮುಂಡೇಶ್ವರಿ ಪಂಚಲೋಹದ ವಿಗ್ರಹದ ಎದುರಿಗೆ ಸ್ಥಾಪಿಸಿರುವ 11 ಹೋಮಕುಂಡಗಳಲ್ಲಿ ಅರ್ಚಕರ ತಂಡ, ಹೋಮ - ಹವನ ನಡೆಸಿತು. ಆರಂಭದಲ್ಲಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಹೋಮಕುಂಡಕ್ಕೆ ಅಗ್ನಿಸ್ಪರ್ಶ ಮಾಡಿದರು. ನೂರಾರು ದಂಪತಿಗಳು ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದರು.

ಯಾಗದ ಪ್ರಯುಕ್ತ ಬೀಜಾಕ್ಷರ, ಮಂತ್ರಗಳನ್ನು ಪಠಣ ಕಾರ್ಯವೂ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮೊದಲ ದಿನದ ತಂತ್ರಭಾಗ-ಶತಚಂಡಿಕಾ ಯಾಗ ಕಣ್ತುಂಬಿಕೊಂಡರು. ಯಾಗಕ್ಕೆ ಭಕ್ತರು ಸಹ ವಿವಿಧ ಗಿಡಮೂಲಿಕೆ ಹಾಗೂ ಸೌದೆಗಳನ್ನು ತಂದು ಹಾಕುವ ಮೂಲಕ ಯಾಗದ ಪುಣ್ಯಕ್ಕೆ ಪಾತ್ರರಾದರು. ಭಕ್ತಾಧಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತು. ಯಾಗದ ಮೊದಲ ದಿನ ಹಲವು ಗಣ್ಯರು ಹಾಗೂ ಅಧಿಕಾರಿಗಳು ಸಹ ಯಾಗದಲ್ಲಿ ಭಾಗವಹಿಸಿದ್ದರು.

ಭಕ್ತಾಧಿಗಳಿಗೂ ಯಾಗದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಏಳು ದಿನಗಳ ಕಾಲವೂ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೂ ಯಾಗದ ಕಾರ್ಯಕ್ರಮ ನಡೆಯಲಿದೆ. ಮೊದಲದಿನ ಯಾಗ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಸಕಲ ಜೀವರಾಶಿಗಳ ಒಳಿತಿಗಾಗಿ ಶ್ರೀ ಕ್ಷೇತ್ರದ ವತಿಯಿಂದ ಬಹು ಅಪರೂಪವಾದ ತಂತ್ರಭಾಗ-ಶತಚಂಡಿಕಾ ಹಮ್ಮಿಕೊಂಡಿದ್ದೇವೆ ಎಂದು ಅರ್ಚಕರು ತಿಳಿಸಿದ್ದಾರೆ.

ಇದನ್ನೂಓದಿ:ಫ್ರಾನ್ಸ್‌ ರಾಷ್ಟ್ರೀಯ ದಿನಾಚರಣೆ ಕವಾಯತಿನಲ್ಲಿ ಭಾಗಿಯಾಗಲಿದ್ದಾರೆ ಮಂಗಳೂರಿನ ದಿಶಾ ಅಮೃತ್

ABOUT THE AUTHOR

...view details