ರಾಮನಗರ:ಕೋವಿಡ್ ರೋಗಿಗಳಿಗೆ ಸರ್ಕಾರದಿಂದ 75,000 ರೂ. ಸಹಾಯಧನ ಕೊಡಿಸುವುದಾಗಿ ನಂಬಿಸಿ ಹತ್ತಾರು ಮಂದಿಯಿಂದ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಗಡಿ ತಾಲ್ಲೂಕಿನ ಗೇರಹಳ್ಳಿ ಗ್ರಾಮ ಮೂಲದ, ಪ್ರಸ್ತುತ ರಾಮನಗರದ ವಾರ್ಡ್ ನಂ.27ರ ರಾಯರದೊಡ್ಡಿಯಲ್ಲಿ ವಾಸವಿರುವ ಪಿ.ಭರತ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಕೋವಿಡ್ ಪಾಸಿಟಿವ್ ಬಂದು ಚಿಕಿತ್ಸೆ ಪಡೆದಿರುವ ರೋಗಿಗಳಿಗೆ ಸರ್ಕಾರ 75 ಸಾವಿರ ರೂ ಸಹಾಯಧನ ನೀಡುತ್ತಿದ್ದು, ಅದನ್ನು ಕೊಡಿಸುವುದಾಗಿ ನಂಬಿಸಿ ಸೋಂಕು ಪರೀಕ್ಷೆ, ಚಿಕಿತ್ಸೆಗೆ ಸಂಬಂಧಿಸಿದ ಆಸ್ಪತ್ರೆ ದಾಖಲೆಗಳನ್ನು ಪಡೆದು ಫೋನ್ ಪೇ ಮೂಲಕ 5 ಸಾವಿರ ರೂ ಪಡೆದಿದ್ದಾನೆ. ನಂತರ ಸಹಾಯಧನವೂ ಇಲ್ಲ, ಕೊಟ್ಟ ಕಾಸು ವಾಪಸ್ ಬಾರದ ಕಾರಣ ವಂಚನೆಯ ಅರಿವಾಗಿ ಕೂಟಗಲ್ ಗ್ರಾಮದ ಕೀರ್ತಿಗೌಡ ಎಂಬುವರು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ವೇಳೆ ಹಲವು ಮಂದಿಗೆ ಇದೇ ರೀತಿ ವಂಚಿಸಿರುವುದು ಕಂಡುಬಂದಿದೆ.