ರಾಮನಗರ: ಬೇರೊಂದು ಹುಡುಗಿಯನ್ನು ಮೊಮ್ಮಗಳೆಂದು ತೋರಿಸಿ ಬ್ಯಾಂಕಿನ ಖಾತೆಯಲ್ಲಿ ಮೃತ ಅಜ್ಜಿ ಠೇವಣಿ ಇರಿಸಿದ್ದ ಸುಮಾರು 5 ಲಕ್ಷ ರುಪಾಯಿಯನ್ನು ವಂಚಿಸಿದ ಘಟನೆ ಬಿಡದಿಯಲ್ಲಿ ನಡೆದಿದೆ.
ಕೆನರಾ ಬ್ಯಾಂಕ್ ಬಿಡದಿ ಶಾಖೆಯಲ್ಲಿ ದಿ.ನಂಜಮ್ಮ ಠೇವಣಿ ಇರಿಸಿದ್ದ 5 ಲಕ್ಷ ರೂ.ಗಳನ್ನು ರತ್ನಮ್ಮ ಮತ್ತು ಜಗದೀಶ್ ಎಂಬುವವರು ಹುಡುಗಿಯೊಂದಿಗೆ ಸೇರಿ ದೋಚಿದ್ದಾರೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ಕೇಶವಮೂರ್ತಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ದೂರಿನಲ್ಲೇನಿದೆ?2022ರ ಜೂನ್ 4ರಂದು ರತ್ನಮ್ಮ ಮತ್ತು ಜಗದೀಶ್ ಎಂಬುವರು ಕುಮಾರಿ ಜ್ಞಾನೇಶ್ವರಿ ಎಂಬುವರನ್ನು ಬ್ಯಾಂಕಿಗೆ ಕರೆತಂದಿದ್ದಾರೆ. ಈ ಹಿಂದೆ ಜ್ಞಾನೇಶ್ವರಿ ಹೆಸರಿನಲ್ಲಿ ಅವರ ಅಜ್ಜಿ ನಂಜಮ್ಮ ಎಂಬುವರು ತಮ್ಮ ಬ್ಯಾಂಕಿನಲ್ಲಿ 5 ಲಕ್ಷ ರೂ. ಠೇವಣಿ ಇಟ್ಟಿರುವುದನ್ನು ಪ್ರಸ್ತಾಪಿಸಿದ್ದಾರೆ. ನಂಜಮ್ಮನವರು ಮರಣ ಹೊಂದಿದ್ದು ಠೇವಣಿ ಹಣ ಹಿಂಪಡೆಯುವುದಾಗಿ ಹೇಳಿ ಕ್ಲೈಮ್ ಅರ್ಜಿ ಸಲ್ಲಿಸಿದ್ದಾರೆ.
ಜ್ಞಾನೇಶ್ವರಿ ಮೈನರ್ ಆಗಿದ್ದರಿಂದ ಅವರ ಅಜ್ಜಿಯ ಮಗಳಾದ ರತ್ನಮ್ಮ ಎಂಬುವರನ್ನು ಮೈನಾರ್ ಗಾರ್ಡಿಯನ್ನಾಗಿ ಮಾಡಿರುವುದಾಗಿ ತಿಳಿಸಿದ್ದಾರೆ. ರತ್ನಮ್ಮ ಮತ್ತು ಜಗದೀಶ್ ಸಲ್ಲಿಸಿರುವ ದಾಖಲೆಗಳನ್ನು ಬ್ಯಾಂಕಿನ ಅಧಿಕಾರಿಗಳು ಪರಿಶೀಲಿಸಿ ರತ್ನಮ್ಮ ಅವರ ತಾಯಿ ನಂಜಮ್ಮ ಎಂಬುವರು ಅವರ ಮಗನ ಮಗಳಾದ ಅಂದರೆ, ಮೊಮ್ಮಗಳಾದ ಜ್ಞಾನೇಶ್ವರಿ ಮೈನರ್ ಗಾರ್ಡಿಯನ್ ರತ್ನಮ್ಮ ಹೆಸರಿನಲ್ಲಿ ಇಟ್ಟಿರುವ ಮೂಲ ಠೇವಣಿ, ಬಾಂಡ್ ಪತ್ರ (0426332000162), ಜ್ಞಾನೇಶ್ವರಿ ಆಧಾರ್ಕಾರ್ಡ್, ನಂಜಮ್ಮನ ಮರಣ ದೃಢೀಕರಣ ಪತ್ರದೊಂದಿಗೆ ಕ್ಲೈಮ್ ಅರ್ಜಿ ಸಲ್ಲಿಸಿದ್ದಾರೆ.
ಅದರಂತೆ ಶಾಖೆಯ ಸಿಬ್ಬಂದಿ, ಜ್ಞಾನೇಶ್ವರಿ ಮತ್ತು ಅವರ ತಂದೆ ಮೈನರ್ ಗಾರ್ಡಿಯನ್ ಜಗದೀಶ ಎಂಬುವರ ಹೆಸರಿಗೆ ಜಂಟಿಯಾಗಿ ಕೆನರಾ ಬ್ಯಾಂಕಿನಲ್ಲಿ ತೆರೆದಿರುವ ಉಳಿತಾಯ ಖಾತೆ (110054698948) ಗೆ 2022ರ ಜೂನ್ 23ರಂದು ಠೇವಣಿ ಹಣ ವರ್ಗಾಯಿಸಿದ್ದಾರೆ. ಆ ನಂತರ 2022ರ ಜುಲೈ 1ರಂದು ನಂಜಮ್ಮ ಪುತ್ರ ಚಂದ್ರಶೇಖರ್ ಬ್ಯಾಂಕಿಗೆ ಬಂದು ಅವರ ಮಗಳು ಅಂದರೆ ನಂಜಮ್ಮನ ಮೊಮ್ಮಗಳಾದ ಜ್ಞಾನೇಶ್ವರಿ ಹೆಸರಿನಲ್ಲಿ ನಮ್ಮ ತಾಯಿ ಇಟ್ಟಿರುವ ಠೇವಣಿ ಹಣವನ್ನು ಪಡೆಯಲು ಬಂದಿರುವುದಾಗಿ ತಿಳಿಸಿದ್ದಾರೆ. ಆಗ ರತ್ನಮ್ಮ ಮತ್ತು ಜಗದೀಶ್ ಬ್ಯಾಂಕಿಗೆ ಮೋಸ ಮಾಡಿ ಹಣ ಲಪಟಾಯಿಸಿರುವುದು ಗೊತ್ತಾಗಿದೆ.
ರತ್ನಮ್ಮ ಮತ್ತು ಜಗದೀಶ್‌ನೊಂದಿಗೆ ಶಾಮೀಲಾದವರ ವಿರುದ್ಧ ಕೂಲಂಕಷವಾಗಿ ತನಿಖೆ ಮಾಡಿ ಮೋಸ ಮಾಡಿ ಪಡೆದಿರುವ 4,99,989 ರೂ.ಗಳನ್ನು ಬ್ಯಾಂಕಿಗೆ ಮರುಪಾವತಿ ಮಾಡುವಂತೆ ಹಾಗು ಕಾನೂನು ಕ್ರಮ ಜರುಗಿಸುವಂತೆ ಬ್ಯಾಂಕಿನ ವ್ಯವಸ್ಥಾಪಕ ಕೇಶವಮೂರ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಸಾರ್ವಜನಿಕವಾಗಿ ವ್ಯಕ್ತಿಗೆ ಹಲ್ಲೆ: ಕುರುಗೋಡು ಠಾಣೆಯ ಪಿಎಸ್‌ಐ ಅಮಾನತು