ರಾಮನಗರ: ಜಮೀನು ಕೊಡಿಸುವುದಾಗಿ ನಂಬಿಸಿ ಸ್ನೇಹಿತನನ್ನೇ ವಂಚಿಸಿ ಬೆದರಿಕೆ ಹಾಕಿದ್ದ ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಾಗಡಿ ಹಾಗೂ ರಾಮನಗರ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
ಬೆಂಗಳೂರು ಮೂಲದ ಮುಂಬೈನಲ್ಲಿ ನೆಲೆಸಿರುವ ಶ್ರೀನಿವಾಸ ವೆಂಕೋಬ ಸಿರಿಗೆರೆ ಎಂಬ ಉದ್ಯಮಿ ನೀಡಿದ ದೂರಿನನ್ವಯ ಬೆಂಗಳೂರಿನ ಪಿ.ವೈ. ರಾಜೇಂದ್ರಪ್ಪ ಎಂಬುವರ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು.
ಪ್ರಕರಣದ ಹಿನ್ನೆಲೆ:ದೂರುದಾರ ಶ್ರೀನಿವಾಸ್ ಸಿರಿಗೆರೆಯ ಶಾಲಾ ದಿನಗಳ ಸ್ನೇಹಿತನಾಗಿದ್ದ ಆರೋಪಿ ಪಿ ವೈ ರಾಜೇಂದ್ರಪ್ಪ ಮಾಗಡಿ ಹತ್ತಿರದ ಮಂಚನಬೆಲೆಯಲ್ಲಿ 150 ಎಕರೆ ಜಮೀನು ಕೊಡಿಸುವುದಾಗಿ ಭರವಸೆ ನೀಡಿ 2.92 ಕೋಟಿ ಮೌಲ್ಯದ ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.
2006 ರಲ್ಲಿ ಮುಂಬೈಗೆ ಭೇಟಿ ನೀಡಿದ್ದ ರಾಜೇಂದ್ರಪ್ಪ ಸುಮಾರು 50 ಸಾವಿರದಿಂದ 2 ಲಕ್ಷದ ಬೆಲೆಯಲ್ಲಿ ಜಮೀನು ಕೊಡಿಸುವುದಾಗಿ 3 ಕೋಟಿಯನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಅದೇ ವರ್ಷ ಇಬ್ಬರೂ ಸಹ ಕಾನೂನು ಒಪ್ಪಂದದ ಪ್ರಕಾರ ಭೂಮಿಯನ್ನು ಪಡೆಯಲು ಪವರ್ ಆಫ್ ಅಟಾರ್ನಿಯನ್ನು ಅರೋಪಿ ಪಿ.ವೈ.ರಾಜೇಂದ್ರಪ್ಪ ಪಡೆದಿದ್ದಾರೆ. ಅಲ್ಲದೇ ಶ್ರೀನಿವಾಸ್ ಸಿರಿಗೆರೆ ಅವರಿಂದ 2.95 ಕೋಟಿಯನ್ನು ಸಾಲವಾಗಿ ಪಡೆದು ಬಳಿಕ ಯಾವುದೇ ಜಮೀನು ಕೊಡಿಸದೇ ಮೋಸ ಮಾಡಿರುವುದಾಗಿ ಆರೋಪಿಸಲಾಗಿದೆ.
ಆದಾಗ್ಯೂ ದೂರುದಾರರು ಆಗಸ್ಟ್ 2022ರಲ್ಲಿ ಆರೋಪಿಯನ್ನು ಭೇಟಿಯಾಗಿ ಮಾತನಾಡಿದಾಗ ತಾನು ಮೋಸ ಮಾಡಿರುವುದಾಗಿ ಒಪ್ಪಿಕೊಂಡಿರುವ ಆರೋಪಿ ರಾಜೇಂದ್ರಪ್ಪ ಪೊಲೀಸ್ ದೂರು ದಾಖಲಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಶ್ರೀನಿವಾಸ್ ತಾವರೆಕೆರೆ ಪೊಲೀಸರಿಗೆ ದೂರು ನೀಡಿದ್ದರು.
ದೂರು ನೀಡಿ 20 ದಿನಗಳಾದರೂ ಆರೋಪಿಯ ಪತ್ತೆಯಾಗಿರಲಿಲ್ಲ. ಈ ಮಧ್ಯೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಆರೋಪಿಯ ಅರ್ಜಿಯನ್ನು ಮಾಗಡಿ ಹಾಗೂ ರಾಮನಗರ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಇದನ್ನೂ ಓದಿ:ಸಾಲ ಕೊಡಿಸುವುದಾಗಿ ಪಂಗನಾಮ: ಮನೆ ಜಪ್ತಿಯ ಬ್ಯಾಂಕ್ ನೋಟಿಸ್ನಿಂದ ವಂಚನೆ ಬೆಳಕಿಗೆ