ರಾಮನಗರ : ರಾಜ್ಯದಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ. ಹಿಂದೂ ಪರಿಷತ್ ಮತ್ತು ಬಜರಂಗದಳದವರು ಕಿಡಿಗೇಡಿಗಳು. ಸಮಾಜಘಾತುಕರು ಇದ್ದ ಹಾಗೆ. ಅವರಿಗೆ ರೈತರ ಬದುಕು ಗೊತ್ತಿದೆಯಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡರು. ನಮ್ಮ ರೈತರು ಕಟ್ ಮಾಡುವ ಮಾಂಸವನ್ನು ಸ್ವಚ್ಛಗೊಳಿಸಲು ಅದೇ ಸಮಾಜದವರೇ ಬರಬೇಕು. ಈಗ ಹಲಾಲ್ - ಜಟ್ಕಾ ಕಟ್ ಎಂಬ ಹೆಸರಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ನಿಮ್ಮ ಜಟ್ಕಾ ಕಟ್ ಮಾಡೋಕು, ಇನ್ನೊಂದು ಮಾಡೋಕೆ ಆ ಸಮುದಾಯದವರೇ ಬೇಕು. ಹೀಗಿರುವಾಗ ರೇಷ್ಮೆ, ಮಾವು ಬೆಳೆ ಮಾರಾಟಕ್ಕೆ ಈ ಪೋಲಿಗಳು ಬರ್ತಾವಾ ಎಂದು ಗರಂ ಆದರು.
ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆ ನಷ್ಟವಾಗಿದೆ. ಅದನ್ನ ಖರೀದಿ ಮಾಡಲು ಆ ಸಮಾಜದವರೇ ಬರಬೇಕು. ಆಗ ವಿಶ್ವ ಹಿಂದೂ ಪರಿಷತ್ನವರು, ಬಜರಂಗದಳದವರು ಬರಲ್ಲ. ಇವರ ಹೊಟ್ಟೆಪಾಡಿಗೆ ಮತ್ತು ದೇಶ ಹಾಳು ಮಾಡೋಕೆ ಇಂತಹ ವಿಚಾರ ಇಟ್ಟುಕೊಂಡು ಬಂದಿದ್ದಾರೆ. ಇದಕ್ಕೆಲ್ಲ ನಾನು ಕೇರ್ ಮಾಡುವುದಿಲ್ಲ. ಇಷ್ಟು ವರ್ಷ ಹಲಾಲ್ ತಿಂದಿದ್ದೇವೆ. ಏನಾಗಿದೆ.. ನಾವೆಲ್ಲ ಚೆನ್ನಾಗಿದ್ದೀವಲ್ಲ.. ಈಗ ಹಲಾಲ್ ತಿಂದರೆ ತೊಂದರೆ ಆಯ್ತದಾ ಎಂದು ಪ್ರಶ್ನಿಸಿದರು. ಹಲಾಲ್ ತಿಂದಾಗ ನಮ್ಮ ಹಿಂದೂ ದೇವರು ಕನಸಲ್ಲಿ ಬಂದು ಏನು ಹೇಳಲಿಲ್ಲವಲ್ಲ ಎಂದು ಲೇವಡಿ ಮಾಡಿದರು.
ಓದಿ:'ಬೆಲೆಯೇರಿಕೆ ಮುಕ್ತ ಭಾರತ'ಕ್ಕೆ ಕಾಂಗ್ರೆಸ್ ಆಗ್ರಹ: ಸಿಲಿಂಡರ್ಗೆ ಹಾರ ಹಾಕಿ ಪ್ರತಿಭಟನೆ
ಹಾಗೆಯೇ ಹಲವಾರು ವರ್ಷಗಳಿಂದ ಹಲಾಲ್ ತಿನ್ನುವುದ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಜನ ಸತ್ತರು. ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಆಗಲಿಲ್ಲ. ಆಗ ಎಲ್ಲಿದ್ದರೂ ವಿಶ್ವ ಹಿಂದೂ ಪರಿಷತ್ - ಭಜರಂಗದಳದವರು ಎಂದು ಹೆಚ್ಡಿಕೆ ಗರಂ ಆದರು.
ಸಿಎಂ ಬಸರಾಜ್ ಬೊಮ್ಮಾಯಿ ವಿರುದ್ದ ಗರಂ:ಇನ್ನು ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ.. ಸಿಎಂ ಬೊಮ್ಮಾಯಿಗೆ ಗಂಡಸ್ತನ ಇದ್ದರೆ.. ಕೂಡಲೇ ಈ ರೀತಿ ಮಾತನಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು. ಸಮಾಜ ಹೊಡೆಯುವ ಶಕ್ತಿಗಳು ಹ್ಯಾಂಡ್ ಬಿಲ್ ಹಂಚುತ್ತಿದ್ದಾರೆ. ಯಾವ ಸಂವಿಧಾನಕ್ಕೆ ಗೌರವಿಸುತ್ತಿದ್ದೀರಿ, ಯಾಕೆ ಅಂಬೇಡ್ಕರ್ ಜಯಂತಿ ಆಚರಿಸುತ್ತೀರಿ. ನನಗೆ ವೋಟ್ ಮುಖ್ಯವಲ್ಲ. ಈ ನಾಡು ಶಾಂತಿಯಿಂದ ಬದುಕಬೇಕು. ನಾನು ಮೌನವಾಗಿರಲು ಸಾಧ್ಯವಿಲ್ಲ ಎಂದರು.
ಇದಲ್ಲದೆ ಈ ಬಗ್ಗೆ ಮಾತನಾಡಲು ಕಾಂಗ್ರೆಸ್ನವರಿಗೆ ತಾಕತ್ತಿಲ್ಲ. ಹಿಂದೂಗಳು ವೋಟ್ ಹಾಕ್ತಾರೋ.. ಇಲ್ಲವೋ.. ಎಂಬ ಭಯ ಇದೆ. ಉತ್ತರಪ್ರದೇಶದಲ್ಲಿ ನಿಮ್ಮ ಆಟ ಆಡಿಕೊಳ್ಳಿ, ನಮ್ಮ ರಾಜ್ಯ ಇಲ್ಲಿ ಬೇಡ ಎಂದು ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕೆಂಡಾಮಂಡಲ ಆದರು.
ಯುಗಾದಿ ಹಬ್ಬದಂದು ಇಸ್ಪೀಟ್ಗೆ ಅವಕಾಶ ಕೊಡಿ:ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾನು ಇಸ್ಪೀಟ್ಗೆ ಪ್ರಚೋದನೆ ಕೊಡ್ತಿಲ್ಲ. ಮೊದಲಿನಿಂದಲೂ ನಡೆದುಬಂದಿರುವ ಸಂಪ್ರದಾಯ. ಈ ಹಬ್ಬದ ಮೊದಲ ಎರಡು ದಿನ ಅವಕಾಶ ಕೊಡಿ. ಪ್ರತಿದಿನದ ಚಟುವಟಿಕೆ ಅಲ್ಲ. ಪ್ರತಿನಿತ್ಯ ಆಡಿದರೆ ನೀವು ಅರೆಸ್ಟ್ ಮಾಡಿಕೊಳ್ಳಿ. ಎರಡು ದಿನ ಪೊಲೀಸರನ್ನ ಕಳುಹಿಸಿ ರೈತರಿಗೆ ತೊಂದರೆ ಕೊಡಬೇಡಿ. ಇಲ್ಲಿ ಸಾವಿರಾರು ರೂಪಾಯಿ ಬೆಟ್ಟಿಂಗ್ ಕಟ್ಟಲ್ಲ, 50 -100 ರೂ. ಕುಟುಂಬದ ಜತೆಗೆ ಆಡಿಕೊಳ್ತಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಓದಿ:ಮುಂದಿನ ಹಣಕಾಸು ವರ್ಷದಲ್ಲಿ ಅಣುಸ್ಥಾವರಗಳಿಗಾಗಿ 100 ಟನ್ ಯುರೇನಿಯಂ ಆಮದು
ನಿಖಿಲ್ ಮಂಡ್ಯದಿಂದಲೇ ಸ್ಪರ್ಧೆ: ಮುಂದಿನ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದಲೇ ಲೋಕಸಭೆಗೆ ಸ್ಪರ್ಧೆ ಮಾಡಿಸುತ್ತೇನೆ. ಮಂಡ್ಯ ಜಿಲ್ಲೆಯ ಜನರು ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡ್ತಾರೆ. ಇವತ್ತಿನ ಮಂಡ್ಯ ಸಂಸದರ ಹೇಳಿಕೆಗಳು ನೋಡಿದಾಗ ನನ್ನ ಮನಸ್ಸಿಗೆ ಬಂದಿದೆ. ಅವತ್ತು ನಮ್ಮ ವಿರುದ್ಧ ಕುತಂತ್ರದ ರಾಜಕಾರಣ ನಡೆಯಿತು. ಕಾಂಗ್ರೆಸ್, ಬಿಜೆಪಿ, ರೈತಸಂಘ ಸೇರಿದ್ದರು. ನನಗೆ ಮಂಡ್ಯ ಜಿಲ್ಲೆಯ ಜನರ ಮೇಲೆ ನಂಬಿಕೆಯಿದೆ ಎಂದು ನಿಖಿಲ್ ಕುಮಾರಸ್ವಾಮಿ ವಿರುದ್ಧದ ಸಂಸದೆ ಸುಮಲತಾ ಹೇಳಿಕೆಗೆ ಮಾಜಿ ಸಿಎಂ ಹೆಚ್ಡಿಕೆ ವಾಗ್ದಾಳಿ ನಡೆಸಿದರು.