ರಾಮನಗರ: ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬದಾಮಿ ಕ್ಷೇತ್ರಕ್ಕೆ 1200 ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಜೊತೆಗೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 19 ಸಾವಿರ ಕೋಟಿ ಹಣ ಕೊಟ್ಟಿದ್ದೇನೆ. ಆದರೆ ಆಗ ಸ್ಥಗಿತವಾಗಿದ್ದನ್ನ, ಈ ಸರ್ಕಾರದಲ್ಲಿ ಕ್ಲಿಯರ್ ಮಾಡಿದ್ದಾರೆಯೇ ಹೊರತು ಬಿಜೆಪಿಯವರೇನು ಹೊಸದಾಗಿ ಅನುದಾನ ನೀಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿರುವವರ ಕುರಿತು ಪ್ರತಿಕ್ರಿಯಿಸಿ, ಶಾಂತಿಯ ವಾತಾವರಣ ಹಾಳು ಮಾಡಬೇಡಿ, ಸರಿಪಡಿಸಿಕೊಳ್ಳಿ ಎಂದಿದ್ದೇನೆ. ಅದಕ್ಕಾಗಿ ನನ್ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೀಳುಮಟ್ಟದ ಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲವನ್ನು ಕೂಲ್ ಆಗಿಯೇ ತೆಗೆದುಕೊಂಡಿದ್ದೇನೆ, ನಾನು ಆಕ್ರೋಶದಲ್ಲಿ ಏನನ್ನು ಹೇಳಲ್ಲ, ನನ್ನಷ್ಟು ತಾಳ್ಮೆಯಿಂದ ಇರುವವರು ರಾಜಕಾರಣದಲ್ಲಿ ಯಾರು ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.
ಕುಮಾರಸ್ವಾಮಿ ಹಣಿಯೋಕೆ ಸಿದ್ದುಗೆ ಬಿಜೆಪಿ ಸರ್ಕಾರ ಮಣೆ ಹಾಕಿದೆ ಎಂಬ ವಿಚಾರವಾಗಿ ಮಾಧ್ಯಮದವರು ಕೇಳಿದಾಗ, ರಾಜಕಾರಣದಲ್ಲಿ ಒಳ ಒಪ್ಪಂದಿಂದ ಬದುಕುತ್ತೇವೆಂದರೆ ಹೆಚ್ಚು ದಿನ ಉಳಿಯಲ್ಲ ನೇರವಾಗಿರಬೇಕು ಅಷ್ಟೇ ಎಂದರು.
ಕೊಡಗು ಪ್ರವಾಹ ಸಂತ್ರಸ್ತರಿಗೆ ಹೆಚ್ಡಿಕೆ ಸರ್ಕಾರದಲ್ಲಿ ಪರಿಹಾರ ಘೋಷಣೆಯಾಯ್ತು ಅಷ್ಟೇ ಕೊಟ್ಟಿದ್ದು ಮಾತ್ರ ಬಿಜೆಪಿ ಸರ್ಕಾರದಲ್ಲಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಆ ಪ್ರತಾಪ್ ಸಿಂಹನಿಗೆ ಏನಾದ್ರು ತಿಳುವಳಿಕೆ ಇದ್ರೆ ನಾನೇನು ಪರಿಹಾರ ಕೊಟ್ಟಿದ್ದೆ, ಎಷ್ಟು ಹಣ ಕೊಟ್ಟಿದ್ದೆ ಹೋಗಿ ನೋಡಿ ಬರಬೇಕು. ಪ್ರತಾಪ್ ಸಿಂಹನ ಕೈಯಲ್ಲಿ ನಾನು ಹೇಳಿಸಿಕೊಳ್ಳಬೇಕೆ, ಕೆಲಸ ಯಾವ ರೀತಿ ಮಾಡಬೇಕು ಅಂತಾ ಎಂದು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ಮುಂದುವರೆದು, ಬರವಣಿಗೆ ಮುಖ್ಯ ಅಲ್ಲ, ಜನರಿಗೆ ಯಾವ ರೀತಿ ಸ್ಪಂದಿಸಬೇಕೆಂದು ತಿಳಿದಿರುವವನು ನಾನು. ಬರವಣಿಗೆಯಲ್ಲಿ, ಟ್ವೀಟ್ನಲ್ಲಿ ಕೆಟ್ಟ ಭಾವನೆಗಳನ್ನ ವ್ಯಕ್ತಪಡಿಸುವವನು ನಾನಲ್ಲ. ಪ್ರತಾಪ್ ಸಿಂಹಗೆ ಯೋಗ್ಯತೆ ಇದ್ದರೆ ಅವರ ಸಿಎಂಗೆ, ಪ್ರಧಾನಮಂತ್ರಿಗೆ ಹೇಳಲಿ, ರಾಜ್ಯದಲ್ಲಿರುವ ಜನರ ಸಮಸ್ಯೆಗಳನ್ನ ಬಗೆಹರಿಸಲಿ ಎಂದು ವಾಗ್ದಾಳಿ ನಡೆಸಿದರು.