ಕರ್ನಾಟಕ

karnataka

ETV Bharat / state

ಜಲಸಂಪನ್ಮೂಲ ಸಚಿವರು ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ರಾಜ್ಯ ಸರ್ಕಾರ ಮೊದಲು‌ ನಮ್ಮ ರೈತರ ಹಿತ ಕಾಯುವ ಬದಲು ಬೇರೆ ರಾಜ್ಯದ ರೈತರ ಹಿತ ಕಾಪಾಡಲು ಹೊರಟಿದೆ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

former-cm-hd-kumaraswamy-reaction-on-cauvery-water-dispute
ಜಲಸಂಪನ್ಮೂಲ ಸಚಿವರು ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ

By ETV Bharat Karnataka Team

Published : Sep 19, 2023, 5:42 PM IST

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

ರಾಮನಗರ:ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡದಿದ್ದರೆ ತಪ್ಪಾಗುತ್ತದೆ ಎಂದು ಜಲಸಂಪನ್ಮೂಲ ಮಂತ್ರಿಗಳು ರಾತ್ರಿಯಿಂದ ನೀರು ಬಿಟ್ಟಿದ್ದಾರೆ. ನಿನ್ನೆಯೇ ಸಚಿವರು ತರಾತುರಿಯಲ್ಲಿ ಈ ನಿರ್ಧಾರ ಮಾಡಿ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಮಾಜಿ‌ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹರಿಹಾಯ್ದರು.

ರಾಮನಗರ ಜಿಲ್ಲೆ ಬಿಡದಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದು, ಆ ಸಮಯದಲ್ಲಿ ಕಾವೇರಿ ನೀರಾವರಿ ನಿರ್ವಹಣಾ ಪ್ರಾಧಿಕಾರಕ್ಕೆ ತಮಿಳುನಾಡು ಒತ್ತಡ ಹಾಕಿದೆ. ಸುಮಾರು 15 ದಿನಗಳ ಕಾಲ ನೀರು ಬಿಡುಗಡೆ ಮಾಡುವಂತೆ ಆದೇಶ ಬಂದಿದೆ ಎಂದರು.

ಕೋರ್ಟ್ ಆದೇಶದಂತೆ ಬಿಡದಿದ್ದರೆ ತಪ್ಪಾಗುತ್ತೆ ಅಂತ ಜಲಸಂಪನ್ಮೂಲ ಮಂತ್ರಿಗಳಾದ ಡಿ ಕೆ ಶಿವಕುಮಾರ್ ರಾತ್ರಿಯಿಂದ ನೀರು ಬಿಟ್ಟಿದ್ದಾರೆ. ಹಿಂದಿನ ಸರ್ಕಾರ ನೀರು ಬಿಟ್ಟಿಲ್ವಾ ಅಂತ ಕೇಳಿದ್ದಾರೆ. ಹೌದು, ಹಿಂದಿನ ಸರ್ಕಾರದಲ್ಲೂ ನೀರು ಬಿಟ್ಟಿದ್ದಾರೆ. ಆದರೆ ಈ ವರ್ಷ ನಮ್ಮ ರೈತರಿಗೆ ನೀರು ಕೊಡುವುದಕ್ಕೆ ಆಗುತ್ತಿಲ್ಲ. ಇವತ್ತು ರೈತರು ಬೆಳೆದ ಬೆಳೆಗಳನ್ನ ಟ್ರಾಕ್ಟರ್​ಗಳಲ್ಲಿ ಉಳುಮೆ ಮಾಡುತ್ತಿದ್ದಾರೆ. ಅನೇಕ ಸಂಘಟನೆಗಳು ಈಗಾಗಲೇ ಪ್ರತಿಭಟನೆ ಮಾಡಿವೆ ಎಂದು ಹೇಳಿದರು.

ತಮಿಳುನಾಡಿನಿಂದ ಹತ್ತು-ಹದಿನೈದು ಜನ ಅಧಿಕಾರಿಗಳು ನೀರಾವರಿ ಹಂಚಿಕೆಯ ವರ್ಚುವಲ್​ ಸಭೆಯಲ್ಲಿ ಭಾಗವಹಿಸುತ್ತಾರೆ. 11ಕ್ಕೆ ಸಭೆ ಆಗಿದೆ, ಅದಾದ ನಂತರ ಸುಪ್ರೀಂಕೋರ್ಟ್​ಗೆ ಅರ್ಜಿ ಹಾಕಿದ್ದರು. ನಾನು ಆಗಲೇ ನಮ್ಮವರು ಸಹ ಹೋಗಿ ಅರ್ಜಿ ಹಾಕಿ ಎಂದು ಹೇಳಿದ್ದೆ‌. ಈಗಾಗಲೇ ಪ್ರಕರಣ ಸುಪ್ರೀಂಕೋರ್ಟ್​ಗೆ ಹೋಗಿರುವುದರಿಂದ ಯಾಕೆ ಭಯ. ಕೋರ್ಟ್ ಆದೇಶ ಏನ್ ಬರುತ್ತೋ ನೋಡೋಣ. ಸುಪ್ರೀಂಕೋರ್ಟ್ ನಿಂದ ಈಗಾಗಲೇ 2007ರಲ್ಲಿ ಅಂತಿಮ ತೀರ್ಪು ಬಂದಿದ್ದು, ದೇವೇಗೌಡರ ಮಾರ್ಗದರ್ಶನದಲ್ಲಿ ಮರು ಅರ್ಜಿ ಹಾಕಿದ್ದೆವು. ಆದಾದ ಬಳಿಕ 2018ರಲ್ಲಿ ರಾಜ್ಯದ ಪರವಾಗಿ ಆದೇಶ ಬಂತು. 18 ಟಿಎಂಸಿ ನೀರು ಹಂಚಿಕೆಗೆ ಆದೇಶ ಬಂದಿತು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕೂಡ ನಮಗೆ ನೀರು ಇಲ್ಲದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ರಾತ್ರೋರಾತ್ರಿ ನೀರು ಬಿಡುವ ಅವಶ್ಯಕತೆ ಏನಿತ್ತು. ಮೊದಲು‌ ನಮ್ಮ ರೈತರ ಹಿತ ಕಾಯುವ ಬದಲು ಬೇರೆ ರಾಜ್ಯದ ರೈತರ ಹಿತ ಕಾಪಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ನಮ್ಮ ಡ್ಯಾಂ ನಮ್ಮ ಉಪಯೋಗಕ್ಕೆ ಅಲ್ಲವೆ:ನಮ್ಮ ದುಡ್ಡಿನಲ್ಲಿ ಕೆಆರ್‌ಎಸ್‌ ಡ್ಯಾಂ ಕಟ್ಟಿರೋದು ತಮಿಳುನಾಡಿಗೆ ನೀರು ಬಿಡುವುದಕ್ಕಾ?. ಬೇಕಿದ್ರೆ ಅವರ ರಾಜ್ಯದಲ್ಲಿ ಅವರದ್ದೇ ದುಡ್ಡಿನಲ್ಲಿ ಎರಡು ಮೂರು ಡ್ಯಾಂ ಕಟ್ಟಲಿ. ಕರ್ನಾಟಕ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ಸಂಸದರು ನಿನ್ನೆ ರಾಜ್ಯಸಭೆಯಲ್ಲಿ ಹೇಳುತ್ತಾರೆ. ನಾನು ದೆಹಲಿಗೆ ಭೇಟಿ ನೀಡಿದಾಗ ಪ್ರಧಾನಿ ಮೋದಿ ಅವರ ಜೊತೆ ಈ ವಿಚಾರವಾಗಿ ಚರ್ಚಿಸುವೆ ಎಂದು ಹೆಚ್​ಡಿಕೆ ತಿಳಿಸಿದರು.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ರಾಜ್ಯಸಭೆಯಲ್ಲಿ ಕಾವೇರಿ ವಿಚಾರವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲಿದ್ರು ಎಂದು ನಾನು ಕಾಂಗ್ರೆಸ್‌ಗೆ ಕೇಳುತ್ತೇನೆ. ನಿಲ್ಲಲು ಸಾಧ್ಯವಾಗದೆ ಇರೋ ಪರಿಸ್ಥಿತಿಯಲ್ಲೂ ದೇವೇಗೌಡರು ಸದನದಲ್ಲಿ ಚರ್ಚೆ ಮಾಡಿದ್ದಾರೆ. ಸಂಸತ್ತಿನಲ್ಲಿ ದೇವೇಗೌಡರು ಏಕಾಂಗಿಯಾಗಿ ಹೋರಾಟ ಮಾಡಬೇಕು. ಇಂಡಿಯಾ ಒಕ್ಕೂಟದ ಅಧ್ಯಕ್ಷ ಖರ್ಗೆ ಅವರು ಕಾವೇರಿ ಬಗ್ಗೆ ಮಾತನಾಡಬೇಕಿತ್ತು, ಯಾಕೆ ಮಾತನಾಡಿಲ್ಲ ಎಂದು ಕಾಂಗ್ರೆಸ್​ ನಾಯಕರನ್ನು ಪ್ರಶ್ನಿಸಿದರು.

ಇನ್ನು ನೀರಿನ ವಿಚಾರದಲ್ಲಿ ತಮಿಳುನಾಡಿನವರು ಹೇಗೆ ನಡೆದುಕೊಳ್ಳುತ್ತಾರೆ. ನೀವು ಹೇಗೆ ನಡೆದುಕೊಳ್ಳುತ್ತಿದ್ದೀರಾ ಎಂದು ಗೊತ್ತಾಗುತ್ತದೆ. ತಮಿಳುನಾಡು ಅರ್ಜಿ ಹಾಕಿದ ತಕ್ಷಣವೇ ನೀರು ಯಾಕೆ ಬಿಟ್ಟರು. ಪ್ರಾಧಿಕಾರ ನೀರು ಬಿಡು ಎಂದು ಹೇಳಿದ ತಕ್ಷಣ ಬಿಡಬೇಕು ಅಂತೇನಿಲ್ಲ. ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿ. ಸ್ವಾತಂತ್ರ್ಯ ಬಂದ ಬಳಿಕವೂ ನಮಗೆ ನೀರಿನ ಹಂಚಿಕೆ ಸರಿಯಾಗಿ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:ತಮಿಳುನಾಡಿಗೆ ಕಾವೇರಿ ನೀರು: ಕತ್ತೆಗಳ ಮೆರವಣಿಗೆ ಮಾಡಿ ಮಂಡ್ಯ ರೈತರ ಆಕ್ರೋಶ

ABOUT THE AUTHOR

...view details