ರಾಮನಗರ:ನನ್ನ ಅಧಿಕಾರಾವಧಿಯಲ್ಲಿ ರೈತರ ಸಾಲಮನ್ನಾ ಮಾಡುವ ನಿಟ್ಟಿನಲ್ಲಿ ಕೈಗೊಂಡ ದೊಡ್ಡಮಟ್ಟದ ನಿರ್ಣಯದಿಂದಾಗಿ ಖಜಾನೆಗೆ ಆರ್ಥಿಕ ಸಂಕಷ್ಟ ತಲೆದೋರಿತ್ತು ಎಂಬ ಆರೋಪ ಮಾಡ್ತಾರೆ. ಅದೆಲ್ಲಾ ಸುಳ್ಳು ನಾನು ಆರ್ಥಿಕತೆಯ ಸಮತೋಲನ ಕಾಪಾಡಿಕೊಂಡು ನನ್ನದೇ ಆದ ಯೋಜನೆಗಳ ಮುಖಾಂತರ ಆರ್ಥಿಕ ಕ್ರೂಢೀಕರಣ ಮಾಡಿದ್ದೇ ಎಂದು ಮಾಜಿ ಸಿಎಂ. ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ
ಮಾಜಿ ಸಿಎಂ. ಹೆಚ್.ಡಿ. ಕುಮಾರಸ್ವಾಮಿ
ಚನ್ನಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಧ್ಯಾಪಕ ವರ್ಗ ಹೆಚ್ಚಿನ ರೀತಿಯಲ್ಲಿ ನನ್ನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ನಾನು ಜನ ಪ್ರತಿನಿಧಿಯಾಗಿ ಕೆಲಸ ಮಾಡುವಾಗ ನನ್ನ ಜವಾಬ್ದಾರಿ ಅರಿತು ಕಾರ್ಯಗತಗೊಳಿಸಿದ್ದೇನೆ. ನಿಮ್ಮ ಪ್ರೀತಿಗೆ ನಾನು ಆಭಾರಿ ಎಂದರು. ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಒಂದು ವರ್ಗದ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆಗೆ ಆದೇಶಿಸಿದ್ದರು. ಆದರೆ, ಹಣವನ್ನ ಮೀಸಲಿಟ್ಟಿರಲಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ 300 ಕೋಟಿ ಹಣ ಬಿಡುಗಡೆ ಮಾಡಿದ್ದು, ಇಂದೂ ಕೂಡ ಲ್ಯಾಪ್‌ಟಾಪ್ ವಿತರಣೆಯಾಗುತ್ತಿವೆ. ಮುಂದೆ ಈಗಿನ ಸರ್ಕಾರ ಲ್ಯಾಪ್‌ಟಾಪ್ ನೀಡುವುದನ್ನನಿಲ್ಲಿಸುವ ಘೋಷಣೆ ಮಾಡಿರೋದು ನಿಜಕ್ಕೂ ವಿಷಾದನೀಯ ಎಂದರು.
ನನ್ನ ಅಧಿಕಾರಾವಧಿಯಲ್ಲಿ ನಾನು ರೈತರ ಸಾಲಮನ್ನಾ ಮಾಡುವ ವೇಳೆ ರಾಷ್ಟ್ರೀಕೃತ ಬ್ಯಾಂಕ್ ಗಳ ಮುಖಂಡರನ್ನ ಕರೆಸಿ ಚರ್ಚಿಸಿಯೇ ತೀರ್ಮಾನಿಸಿದ್ದೆ. ಆದರೆ, ಹೆಚ್ಡಿಕೆ ರೈತರ ಸಾಲಮನ್ನಾ ಮಾಡಲು ಹೋಗಿ ಆರ್ಥಿಕ ಸ್ಥಿತಿ ಹಾಳಾಗಿದೆ ಎನ್ನುವ ಆರೋಪ ಮಾಡ್ತಾರೆ. ಅದೆಲ್ಲಾ ಸುಳು. ನನ್ನ ಕಾಲದಲ್ಲಿ ಯಾವುದೇ ಆರ್ಥಿಕ ಸ್ಥಿತಿ ಹಾಳಾಗಿಲ್ಲ. ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೂಡ ನನ್ನ ಮಾದರಿಯನ್ನೇ ಜಾರಿಗೆ ತಂದಿದ್ದಾರೆ. ದುರಾದೃಷ್ಟವೆಂದರೆ ಮಾಧ್ಯಮದವರು ನನ್ನನ್ನ ಕೆಳಗಿಳಿಸುವ ಪ್ರಯತ್ನದಲ್ಲಿಯೇ ಇದ್ದರೆ ಹೊರತು ನನ್ನ ಸಾಧನೆ ಹೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೆರೆ ಹೆಸರಲ್ಲಿ ಲೂಟಿ:ವಿದ್ಯಾಭ್ಯಾಸ ವಿಚಾರದಲ್ಲಿ ನನ್ನದೇ ಆದ ದೂರದೃಷ್ಟಿ ಇಟ್ಟುಕೊಂಡಿದ್ದೇನೆ. ನಾನು ಮುಖ್ಯಂತ್ರಿಯಾಗಿದ್ದ ವೇಳೆ 1200 ಮೀಸಲಿಟ್ಟಿದ್ದೆ, ಈಗಿನ ಸರ್ಕಾರ ಎಲ್ಲದಕ್ಕೂ ಈಗ ನೆರೆಯ ಕಾರಣ ಕೊಟ್ಟಿದ್ದಾರೆ. ಅಲ್ಲಿಯೂ ನೆರೆಹಾವಳಿ ದುರ್ದೈವಿಗಳ ಹೆಸರಲ್ಲಿ ಲೂಟಿ ಹೊಡೆಯಲಾಗುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.
ಇನ್ನು ಟ್ರಂಪ್ ಭೇಟಿ ಕುರಿತು ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷರು ಭಾರತಕ್ಕೆ ಇದೇ ಮೊದಲು ಬಂದಿಲ್ಲ. ಅಮೆರಿಕ ಅಧ್ಯಕ್ಷರಿಗೆ ದೇಶದ ಸ್ಲಂ ಕಾಣದಂತೆ ಗೋಡೆಕಟ್ಟಿ ಬಣ್ಣ ಬಳಿದು ಕರೆದೊಯ್ದರೆ ಎಲ್ಲವೂ ಸರಿಯಾಗೋದಿಲ್ಲ. ಅದೇ ಹಣವನ್ನ ಸ್ಲಂ ಅಭಿವೃದ್ಧಿ ಮಾಡಬಹುದಿತ್ತು ಎಂದು ಸಲಹೆ ನೀಡಿದರು. ಇನ್ನು ಕಾಲೇಜಿಗೆ ಕ್ಯಾಂಟೀನ್ , ಡೆಸ್ಕ್ , ಚೇರ್ ಎಲ್ಲವನ್ನೂ ಕೊಡಲಿಕ್ಕೆ ತಯಾರಿದ್ದೇನೆ. ವಿದ್ಯಾರ್ಥಿ ಗಳಾದ ನೀವು ಏನೇ ಕಷ್ಟ ಬರಲಿ ಎದುರಿಸಿ ಸಾಧನೆಯ ಗುರಿ ಇಟ್ಟುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ವೇಳೆ ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ 940 ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.