ರಾಮನಗರ: ಬಿಜೆಪಿಯಲ್ಲಿ ಬಹಳಷ್ಟು ಮಂದಿ ಸಿಎಂ ರೇಸ್ನಲ್ಲಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತಾರೆ ಅಂತಾ ಗೊತ್ತಿಲ್ಲ, ಅವರ ಪಕ್ಷದ ಹೈಕಮಾಂಡ್ ಯಾರನ್ನು ಸೂಚಿಸುತ್ತದೆಯೋ ಅವರು ಸಿಎಂ ಆಗುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ನಾಡದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಪಾಲ್ಗೊಂಡ ನಂತರ, ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕಳೆದೆರಡು ದಿನಗಳಿಂದ ಯಾರು ಸಿಎಂ ಎಂದು ಭಾರಿ ಚರ್ಚೆ ನಡೆಯುತ್ತಿದೆ. ನರೇಂದ್ರ ಮೋದಿ ಅವರು ರಾಜ್ಯದ ಎಲ್ಲ ಶಾಸಕರ ಮಾಹಿತಿ ಕಲೆ ಹಾಕಿದ್ದಾರೆ. ಕಳೆದ ಸರ್ಕಾರದ ನ್ಯೂನತೆ, ಒಳ್ಳೆಯ ಕೆಲಸಗಳ ಬಗ್ಗೆ ಮಾಹಿತಿ ತೆಗೆದುಕೊಳ್ಳಲಿದ್ದಾರೆ. ಅವರ ಪಕ್ಷದ ಬಗ್ಗೆ ಅವರು ತೀರ್ಮಾನ ಮಾಡುತ್ತಾರೆ ಎಂದರು.
ಕಾಂಗ್ರೆಸ್‌ನವರು ಒಂದು ಸಮಾಜವನ್ನು ಓಲೈಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಅಂತಾ ಟವಲ್ ಹಾಸಿ ಕುಳಿತಿದ್ದಾರಲ್ಲ, ಅವರೇ ಹೇಳಿದ್ದಾರೆ ಈಗಿದ್ದ ಸಿಎಂ ಭ್ರಷ್ಟರು ಅಂತ. ಮುಂದೆ ಬರುವವರು ಕೂಡಾ ಹಾಗೆಯೇ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಪಾರ್ಟಿ ರಾಜಕೀಯದ ಕುತಂತ್ರ ನಡೆ ಅನುಸರಿಸುತ್ತಿದೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ದೆಹಲಿ ಪ್ರವಾಸದ ಬಗ್ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದೇನು?
ಇದಲ್ಲದೆ ನಾನು ಎರಡು ಬಾರಿ ಸಿಎಂ ಆಗಿದ್ದು ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ. ಆರೂವರೆ ಕೋಟಿ ಜನರ ಸಂಪೂರ್ಣ ಬಹುಮತದಿಂದ ನಾನು ಮುಖ್ಯಮಂತ್ರಿ ಆಗಿರಲಿಲ್ಲ. ಎರಡು ಬಾರಿ ಸಿಎಂ ಆಗಿ ಒಳ್ಳೆಯ ಕೆಲಸ ಮಾಡಿದ ತೃಪ್ತಿ ನನಗಿದೆ. ಬಹುಶಃ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸವಿದೆ ಎಂದರು.