ರಾಮನಗರ:ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ನಾವು ಯಾರಿಗೂ ಮೋಸ ಮಾಡಿಲ್ಲ. ಸುಖಾಸುಮ್ಮನೆ ನನ್ನ ಮಕ್ಕಳಿಗೆ ಹಿಂಸೆ ಕೊಡ್ತಿದ್ದಾರೆ. ನೀವೇ ಅವರನ್ನ ಕಾಪಾಡಬೇಕು. ಅವರಿಗೇನೂ ಗೊತ್ತಿಲ್ಲ ಎನ್ನುತ್ತಾ ಡಿಕೆಶಿ ತಾಯಿ ಗೌರಮ್ಮ ಅಸಹಾಯಕರಾಗಿ ಮಾಜಿ ಸಿಎಂ ಕುಮಾರಸ್ವಾಮಿ ಬಳಿ ನೋವು ತೋಡಿಕೊಂಡರು.
ನನ್ನ ಮಗ ತಪ್ಪು ಮಾಡಿಲ್ಲ ಎಂದು ಕಣ್ಣೀರಿಟ್ಟ ಡಿಕೆಶಿ ತಾಯಿ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿರುವ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಹೆಚ್ಡಿಕೆ ಅವರನ್ನು ಭಾವುಕರಾಗಿಯೇ ಸ್ವಾಗತಿಸಿದ ಡಿಕೆಶಿ ತಾಯಿ ಗೌರಮ್ಮ, ತಮ್ಮ ಮಕ್ಕಳ ಸ್ಥಿತಿ ಬಗ್ಗೆ ಮರುಕ ವ್ಯಕ್ತಪಡಿಸಿದರು.
ಒಂದು ಕಾಲದಲ್ಲಿ (2006) ಹೆಚ್ಡಿಕೆ-ಡಿಕೆಶಿ ರಾಜಕೀಯದಲ್ಲಿ ಕಟ್ಟಾ ವಿರೋಧಿಗಳಾಗಿದ್ದರು. ಆಗ ನೀಡಿದ್ದ ಒಂದು ವಿವಾದಾತ್ಮಕ ಹೇಳಿಕೆಯಿಂದ ಡಿಕೆಶಿಯವರ ತಾಯಿ ಗೌರಮ್ಮರು ಕಾಲಿಗೆರಗಿದ್ದರು ಕುಮಾರಸ್ವಾಮಿ. ಅಲ್ಲದೆ ತನ್ನ ತಾಯಿ ಸಮಾನರಾಗಿರುವ ಅವರ ಬಗ್ಗೆ ಮಾತಿನ ನಡುವೆ ಈ ಪದ ಬಳಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.
ಆದ್ರೆ ಇಂದು ಡಿಕೆಶಿ ಮನೆಗೆ ಭೇಟಿದ್ದ ಹೆಚ್ಡಿಕೆ ಅವರು ಗೌರಮ್ಮ ಅವರ ಕಾಲಿಗೆ ಎರಗಿ ನಮಸ್ಕರಿಸಿದರು. ಈ ವೇಳೆ ತಮ್ಮ ಮಗನನ್ನು ಕಾಪಾಡುವಂತೆ ಗೌರಮ್ಮ ಬೇಡಿಕೊಂಡರು. ನಂತರ ಭಾವುಕರಾಗಿ ಮಾತನಾರಂಭಿಸಿದ ಗೌರಮ್ಮನನ್ನು ಕುಮಾರಸ್ವಾಮಿ ಸಮಾಧಾನಪಡಿಸಿ, ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಇನ್ನು 15 ದಿನಗಳಲ್ಲಿ ಡಿ ಕೆ ಶಿವಕುಮಾರ್ ನಿಮ್ಮ ಬಳಿ ಇರ್ತಾರೆ. ಧೈರ್ಯವಾಗಿರಿ ಎಂದು ಅಭಯ ನೀಡಿದ್ರು. ಅಲ್ಲದೆ ಡಿಕೆಶಿ ಜೊತೆಗೆ ಕಾನೂನು ಸಮರಕ್ಕೆ ಸಾಥ್ ನೀಡೋದಾಗಿ ಘೋಷಿಸಿದ್ರು.