ರಾಮನಗರ: ಜಿಲ್ಲೆಯಲ್ಲಿ ಸಂಭವಿಸಿರುವ ಆನೆದಾಳಿ ಘಟನೆಗಳು, ಹಾನಿ, ನಿಯಂತ್ರಣ ಪರಿಹಾರದ ಕುರಿತು ಅಧಿಕಾರಿಗಳೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಹೆಚ್‌ಡಿಕೆ, ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಬೇಗನೆ ಸಚಿವ ಸಂಪುಟ ವಿಸ್ತರಣೆ ಮಾಡದೆ ಒಬ್ಬರೇ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿತ್ತು. ಅದೇ ರೀತಿ ಈಗಲೂ ಕೂಡ ಬೊಮ್ಮಾಯಿ ಒಬ್ಬರೇ ಇದ್ದಾರೆ. ಬಹುಬೇಗನೆ ಬಿಜೆಪಿ ಹೈಕಮಾಂಡ್ ಶಾಸಕರ ಮನವೊಲಿಸಿ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸಚಿವ ಸಂಪುಟ ಕಸರತ್ತು ಬಿರುಸಿನಿಂದ ನಡೆಯುತ್ತಿದೆ. ಸಚಿವ ಸ್ಥಾನಕ್ಕಾಗಿ ಕೆಲವರು ದೆಹಲಿಗೆ ಹೋಗಿದ್ದಾರೆ. ಈ ಹಿಂದೆ ಕೂಡ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಇದೇ ಸಮಸ್ಯೆ ಇತ್ತು. ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಆದಷ್ಟು ಬೇಗ ಕೇಂದ್ರದವರು ಕ್ಯಾಬಿನೆಟ್ ಬಗ್ಗೆ ನಿರ್ಧಾರ ಮಾಡಲಿ. ಶಾಸಕರ ಮನವೊಲಿಸಿ ಬೇಗ ಸಂಪುಟ ರಚನೆ ಮಾಡಬೇಕಿದೆ ಎಂದರು.