ರಾಮನಗರ: ಸಂಬಂಧಿಕರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕುಟುಂಬಕ್ಕೆ ಜವರಾಯ ಎದುರಾಗಿ, ಇಡೀ ಕುಟುಂಬವನ್ನೇ ಬಲಿ ಪಡೆದಿದ್ದಾನೆ. ಭೀಕರ ಅಪಘಾತದಲ್ಲಿ ಪತಿ, ಪತಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚನ್ನಪಟ್ಟಣ ತಾಲೂಕು ಲಂಬಾಣಿ ತಾಂಡ್ಯಾ ಬಳಿ ಇರುವ ಬೆಂಗಳೂರು ಮೈಸೂರು ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಅಲ್ಟೋ ಮತ್ತು ಇನ್ನೋವಾ ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬ ಐವರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ರವಿ ಪೂಜಾರ್ ಬಿನ್ ಭೀಮಪ್ಪ ಪೂಜಾರಿ (46) ಹಾಗೂ ಅವರ ಮಕ್ಕಳಾದ ಇಂಚರ ಪೂಜಾರಿ (14) ಮತ್ತು ಸಿರಿ ಪೂಜಾರಿ (2) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಲಕ್ಷ್ಮಿ ಪೂಜಾರಿ (40) ಹಾಗೂ ಇನ್ನೋರ್ವ ಮಗಳು ಶಾಂತಲಾ ಪೂಜಾರಿ ( 8 ) ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ರವಿ ಪೂಜಾರಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿಯವರಾಗಿದ್ದು, ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಕರಾಗಿದ್ದರು. ಹೀಗಾಗಿ, ಕೆಂಗೇರಿಯಲ್ಲಿ ವಾಸವಿದ್ದರು. ಅವರ ಪತ್ನಿಯ ತವರೂರಾದ ಟಿ ನರಸೀಪುರದಲ್ಲಿ ನಡೆಯಲಿರುವ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಕ್ಕಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಮುಂದಿನ ಚಕ್ರ ಸಿಡಿದು, ರಸ್ತೆ ವಿಭಜಕವನ್ನ ದಾಟಿ ಮೈಸೂರಿನ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗ ಭೀಕರ ದುರಂತ ಸಂಭವಿಸಿದೆ.