ರಾಮನಗರ: ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುವ ಮೊದಲೇ ಜೀವನಾಧಾರವಾಗಿದ್ದ ಹಸುಗಳಿಗೆ ಕಾಲು ಬಾಯಿ ಜ್ಚರ ವಕ್ಕರಿಸಿ ರೈತನ ಬದುಕನ್ನು ದುಸ್ತರಗೊಳಿಸಿದೆ. ಕೊರೊನಾದಿಂದ ಎಲ್ಲ ಉದ್ಯಮಗಳು ಬಂದ್ ಆಗಿದ್ದರೂ ರೈತನ ಬದುಕಿಗೆ ಆಸರೆಯಾಗಿದ್ದು, ಹೈನು ಉದ್ಯಮ. ಪಟ್ಟಣದಲ್ಲಿ ಕೆಲಸ ಕಳೆದುಕೊಂಡು ವಾಪಸ್ ಊರಿಗೆ ಬಂದ ಮಂದಿ ಕೂಡ ಹಸು ಸಾಕಣೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಆದರೆ, ರಾಸುಗಳಿಗೆ ಕಾಲು ಬಾಯಿ ಜ್ವರ ಬಂದು ಹೈನುಗಾರಿಕೆಯಲ್ಲಿಯೇ ಬದುಕು ಕಟ್ಟಿಕೊಳ್ಳುವ ಕನಸು ಮಣ್ಣಾಗಿದೆ.
ಜಿಲ್ಲೆಯ ಬಿಡದಿ ಹೋಬಳಿಯ ಬಾನಂದೂರು ಗ್ರಾಮದಲ್ಲಿ ಕಳೆದ ಮೂರು ದಿನಗಳಲ್ಲಿ ಐದು ಹಸುಗಳು ಕಾಲು ಬಾಯಿ ಜ್ವರದಿಂದ ಮೃತ ಪಟ್ಟಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ತಕ್ಷಣವೇ ಸರ್ಕಾರ ಸಾಮೂಹಿಕವಾಗಿ ಎಲ್ಲ ಹಸುಗಳಿಗೆ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಬಾನಂದೂರು ಗ್ರಾಮದಲ್ಲಿ ರೈತರು ಹೈನುಗಾರಿಕೆಯನ್ನೇ ನಂಬಿ 30 ಹಸುಗಳನ್ನು ಸಾಕಿದ್ರು. ಕಳೆದ ಮೂರು ದಿನಗಳಿಂದ ಕಾಲು ಬಾಯಿ ಜ್ವರ ಕಾಣಿಸಿಕೊಂಡ ಪರಿಣಾಮ 5 ಹಸುಗಳು ಸಾವನಪ್ಪಿರುವುದರಿಂದ ಸುಮಾರು 2.5ಲಕ್ಷ ರೂ. ನಷ್ಟವಾಗಿದೆ. ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಹಸುಗಳು ಸಾವನ್ನಪ್ಪಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಹಸುಗಳ ರಕ್ಷಣೆಗೆ ಮುಂದಾದ ಹಾಲು ಉತ್ಪಾದಕರ ಸಂಘ :
ಗ್ರಾಮದಲ್ಲಿ ಹಸುಗಳಿಗೆ ಕಾಲು ಬಾಯಿ ಜ್ವರ ಕಾಣಿಸಿಕೊಂಡು ಕೆಲ ಹಸುಗಳು ಮೃತಪಟ್ಟ ಹಿನ್ನೆಲೆ ಎಚ್ಚೆತ್ತ ಹಾಲು ಉತ್ಪಾದಕರ ಸಂಘ ಬಾನಂದೂರು ಗ್ರಾಮದ ಎಲ್ಲ ರಾಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಹಸುಗಳನ್ನು ರಕ್ಷಣೆ ಮಾಡಲು ಮುಂದಾಗಿದೆ. ಬಾನಂದೂರು ಗ್ರಾಮದ ಸುತ್ತಲಿನ ಐದು ಗ್ರಾಮಗಳಲ್ಲಿ ವ್ಯಾಕ್ಸಿನೇಷನ್ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದೇ ರೀತಿ ಜಿಲ್ಲೆಯ ಎಲ್ಲಾ ಹಸುಗಳಿಗೆ ವ್ಯಾಪಕವಾಗಿ ಲಸಿಕೆ ಅಭಿಯಾನ ನಡೆಸಿದರೆ ಹಸುಗಳನ್ನು ಕಾಲು ಬಾಯಿ ಜ್ವರದಿಂದ ರಕ್ಷಣೆ ಮಾಡಬಹುದು.
ಬೆಂಗಳೂರು ಡೇರಿ ವ್ಯಾಪ್ತಿಯ ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 12 ತಾಲೂಕುಗಳಲ್ಲಿ ಸುಮಾರು 5 ಲಕ್ಷ ಹಸುಗಳಿದ್ದು, ಶೇಕಡಾ 20ರಷ್ಟು ಹಸುಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದೆ.
ಸರ್ಕಾರ 15 ವರ್ಷದಿಂದ ಪ್ರತಿ 6 ತಿಂಗಳಿಗೊಮ್ಮೆ ಹಸುಗಳಿಗೆ ಲಸಿಕೆ ನೀಡುತ್ತಿತ್ತು. ಇದರ ಖರ್ಚು ವೆಚ್ಚವನ್ನು ಕೆಎಂಎಫ್ ಭರಿಸುತ್ತಿತ್ತು. ಆದರೆ, ಈ ಬಾರಿ ನೀಡದೆ ಇರುವುದರಿಂದ ರೋಗ ಹೆಚ್ಚಾಗಿ ರೈತರು ಹಸುಗಳನ್ನು ಕಳೆದುಕೊಳ್ಳುವಂತಾಗಿದೆ. ಎಂಪಿಸಿಸಿ ವತಿಯಿಂದ ನೇರವಾಗಿ ಲಸಿಕೆ ಖರೀದಿಸಲು ಸರ್ಕಾರ ಅವಕಾಶ ನೀಡಿಲ್ಲ. ಸರ್ಕಾರ ಖರೀದಿಗೆ ಅವಕಾಶ ಕಲ್ಪಿಸಿದರೆ ರಾಸುಗಳನ್ನು ಕಾಲುಬಾಯಿ ಜ್ವರದಿಂದ ಮುಕ್ತಗೊಳಿಸಲು ಸಾಧ್ಯ.