ರಾಮನಗರ: ರೇಷ್ಮೆ ನಗರಿ ರಾಮನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ತಮಿಳುನಾಡಿನ ಚೆನ್ನೈ ನಗರದಿಂದ ಬಂದಿದ್ದ ಒಂದು ಕುಟುಂಬದ ಪೈಕಿ 2 ವರ್ಷದ ಗಂಡು ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ವಾರದ ಹಿಂದೆ ಚೆನ್ನೈನಲ್ಲಿ ವಾಸವಿದ್ದ ಕುಟುಂಬವೊಂದು, ಮಾಗಡಿ ತಾಲೂಕಿನ ಮಾರಸಂದ್ರ ಗ್ರಾಮಕ್ಕೆ ಬಂದಿತ್ತು. ತಂದೆ, ತಾಯಿ, ಅಜ್ಜಿ, ಚಿಕ್ಕಮ್ಮ ಹಾಗೂ 2 ವರ್ಷದ ಮಗು ಬಂದಿದ್ರು. ಈ ಕುಟುಂಬದವರೆಲ್ಲರ ಗಂಟಲ ದ್ರವವನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಕುಟುಂಬವನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು.
ಇದೀಗ ವರದಿ ಬಂದಿದ್ದು 5 ಜನರ ಪೈಕಿ 2 ವರ್ಷದ ಮಗುವಿನಲ್ಲಿ (P-2134) ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಮಗುವಿಗೆ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಲ್ಲದೇ ಕುಟುಂಬದವರನ್ನುಇದೀಗ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಮಾರಸಂದ್ರ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಪಕ್ಕದ ತುಮಕೂರು ಜಿಲ್ಲೆಯಿಂದ ಕರ್ತವ್ಯಕ್ಕೆಂದು ಬಂದಿದ್ದ ಕೆಎಸ್ಆರ್ಟಿಸಿ ಚಾಲಕನಿಗೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ(P-2135). ಆದ್ರೆ ಆ ಚಾಲಕ ತುಮಕೂರಿನ ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಈ ಚಾಲಕ ಮಾಗಡಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದ. ಅಲ್ಲದೇ ಮಾಗಡಿಯಿಂದ ಬೆಂಗಳೂರಿಗೆ ಬಸ್ ಚಲಾಯಿಸಿದ್ದ ಹಿಸ್ಟರಿ ಕೂಡ ಇದೆ. ಹಾಗಾಗಿ ಅಧಿಕಾರಿಗಳು ಈ ಚಾಲಕನ ಹಿಸ್ಟರಿ ಹುಡುಕಾಟದಲ್ಲಿದ್ದಾರೆ ಎಂದು ತಿಳಿಸಿದರು.
ರಾಮನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಕೇಸ್ ದೃಢ. ಅಲ್ಲದೇ ಕಳೆದ ಒಂದು ವಾರದ ಹಿಂದೆ ಜಿಲ್ಲೆಯ ಬಂದೋಬಸ್ತ್ಗೆಂದು ಹಾಸನದಿಂದ ಕೆಎಸ್ಆರ್ಪಿಯ ತುಕಡಿಯನ್ನು ಕರೆಸಿಕೊಳ್ಳಲಾಗಿತ್ತು. ಈ ಪೈಕಿ ಒಬ್ಬ ಕಾನ್ಸ್ಟೆಬಲ್ನಲ್ಲಿ (P- 1,993) ನಿನ್ನೆ ಪಾಸಿಟಿವ್ ಪತ್ತೆಯಾಗಿದೆ. ಅವರು 4 ದಿನ ರಾಮನಗರದಲ್ಲಿ ವಾಸ್ತವ್ಯ ಹೂಡಿದ್ದು, ಮತ್ತಪ್ಪ ರೈ ನಿಧನದ ವೇಳೆ ಹಾಗೂ ರೇಷ್ಮೆ ಮಾರುಕಟ್ಟೆ ಗಲಾಟೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಇದೀಗ ಈ ಪ್ರಕರಣದಿಂದ ಕೂಡ ಜಿಲ್ಲೆಯ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ಪೊಲೀಸ್ ವರಿಷ್ಟಾಧಿಕಾರಿಗಳು ಆ ಕಾನ್ಸ್ಟೆಬಲ್ ಹಿಸ್ಟರಿಯ ಹುಡುಕಾಟದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.