ರಾಮನಗರ : ಚನ್ನಪಟ್ಟಣ ತಾಲೂಕಿನ ಸೋಗಾಲ ಗ್ರಾಮದಲ್ಲಿ ಕಾರ್ಖಾನೆಯಲ್ಲಿದ್ದ ಯಂತ್ರದಿಂದ ವಿದ್ಯುತ್ ಸೋರಿಕೆಯಾಗಿ ಕಾರ್ಖಾನೆ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ಮಾಯಿಗೆಗೌಡ ಎಂಬುವವರಿಗೆ ಸೇರಿದ ಬೊಮ್ಮಲಿಂಗೇಶ್ವರ ಕಾಯರ್ ಇಂಡಸ್ಟ್ರೀಸ್ ತೆಂಗಿನ ನಾರು ತೆಗೆಯುವ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿಯಿಂದಾಗಿ ಕಾರ್ಖಾನೆಯಲ್ಲಿ ದಾಸ್ತಾನು ಇರಿಸಿದ್ದ ತೆಂಗಿನಕಾಯಿ ಸಿಪ್ಪೆಗಳು, ತೆಂಗಿನ ನಾರು, ವಿವಿಧ ರೀತಿಯ ಯಂತ್ರೋಪಕರಣಗಳು ಸುಟ್ಟು ಕರಕಲಾಗಿವೆ.
ಯಂತ್ರವೊಂದರಿಂದ ವಿದ್ಯುತ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸ್ಥಳದಲ್ಲೇ ಇದ್ದ ತೆಂಗಿನ ನಾರಿಗೆ ಬೆಂಕಿ ತಗುಲಿದೆ. ಬಿಸಿಲ ಬೇಗೆಯ ನಡುವೆ ಬೆಂಕಿ ಇಡೀ ಕಾರ್ಖಾನೆ ಆವರಿಸಿಕೊಂಡಿದೆ. ಈ ವೇಳೆ, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೊರಗೆ ಓಡಿ ಬಂದಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಕಿ ನಂದಿಸಲು ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸಿ ಪಕ್ಕದಲ್ಲೇ ಇದ್ದ ಕೆರೆಯಿಂದ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ಕರೆ ಮಾಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗಾಗಲೇ ವಸ್ತುಗಳು, ಯಂತ್ರಗಳು ಬಹುತೇಕ ಸುಟ್ಟು ಕರಕಲಾಗಿದ್ದವು.
ರಾಮನಗರ ಜಿಲ್ಲಾ ಕೇಂದ್ರದ ಅಗ್ನಿಶಾಮಕ ದಳದ ಎರಡು ವಾಹನ ಮತ್ತು ಚನ್ನಪಟ್ಟಣ ತಾಲ್ಲೂಕಿನ ಒಂದು ವಾಹನ ಸೇರಿ ಮೂರು ಅಗ್ನಿಶಾಮಕ ವಾಹನಗಳು, ಎರಡು ಜೆಸಿಬಿ ವಾಹನಗಳು ಆಗಮಿಸಿದ್ದವು. ಜೊತೆಗೆ ಅಧಿಕಾರಿಗಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಸುಮಾರು ಏಳು ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಸ್ಥಳಕ್ಕೆ ಅಕ್ಕೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಡ್ಯದಲ್ಲಿ ಬೆಂಕಿಗೆ ಆಹುತಿಯಾದ ಕಾರ್ಖಾನೆ: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಚೆಗರೆ ಕಾರ್ಖಾನೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಮೂಗಾಂಬಿಗೈ ಫೈಬರ್ ಮಿಲ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಕಿ ಅವಘಡದಿಂದ ಸುಮಾರು 90 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
ಇಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಚೆಗರೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಕೆಲ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ, ಅದಾಗಲೇ ಬೆಂಕಿಯ ಕೆನ್ನಾಲಿಗೆಗೆ ಕಾರ್ಖಾನೆ ತುಂಬಾ ಹರಡಿದೆ. ಘಟನೆಯಲ್ಲಿ ಯಂತ್ರೋಪಕರಣಗಳು, ಚೆಗರೆ ಸಂಪೂರ್ಣ ಭಸ್ಮವಾಗಿದೆ. ಕಾರ್ಖಾನೆಯ ಸಿಬ್ಬಂದಿ ಇಂದು ರಜೆ ಇದ್ದ ಕಾರಣ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ 8 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಈ ವೇಳೆ, ಅಕ್ಕಪಕ್ಕದ ಕಾರ್ಖಾನೆಗಳಿಗೂ ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸಲಾಗಿತ್ತು. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಟೋಟ: ನಾಲ್ವರಿಗೆ ಗಾಯ