ಕರ್ನಾಟಕ

karnataka

ETV Bharat / state

ಬೆಂಗಳೂರು ಉದ್ಯಮಿ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವರು ಸೇರಿ 6 ಮಂದಿ ವಿರುದ್ಧ ಎಫ್​ಐಆರ್​

ರಾಮನಗರದಲ್ಲಿ ಬೆಂಗಳೂರು ಮೂಲದ ಉದ್ಯಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರು ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

fir-against-6-people-in-businessman-suicide-case
ಬೆಂಗಳೂರು ಉದ್ಯಮಿ ಆತ್ಮಹತ್ಯೆ ಪ್ರಕರಣ

By

Published : Jan 2, 2023, 3:53 PM IST

Updated : Jan 2, 2023, 7:48 PM IST

ಶಾಸಕ ಅರವಿಂದ ಲಿಂಬಾವಳಿ ಸ್ಪಷ್ಟನೆ

ರಾಮನಗರ/ಬೆಂಗಳೂರು:ಉದ್ಯಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರು ಸೇರಿದಂತೆ ಒಟ್ಟು 6 ಜನರ ವಿರುದ್ಧ ಇಲ್ಲಿನ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬೆಂಗಳೂರಿನ ಉದ್ಯಮಿ ಪ್ರದೀಪ್(47) ಭಾನುವಾರ ಬೆಂಗಳೂರಿನ ದಕ್ಷಿಣ ತಾಲೂಕು ನೆಟ್ಟಗೆರೆ ಬಳಿ ತಮ್ಮ ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆಗೂ ಮುನ್ನ ಡೆತ್ ನೋಟ್‌ನಲ್ಲಿ ಪ್ರಭಾವಿ ಮಾಜಿ ಸಚಿವ ಹೆಸರು ಸೇರಿದಂತೆ 6 ಜನರ ಹೆಸರು ಬರೆದಿಟ್ಟಿದ್ದರು. ಡೆತ್ ನೋಟ್‌ನಲ್ಲಿ ಮಾಜಿ ಸಚಿವರು, ರಘುವ ಭಟ್, ಸೋಮಯ್ಯ, ರಮೇಶ್ ರೆಡ್ಡಿ ಹಾಗೂ ಜಯರಾಮ್ ಎಂದು ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಇವರೆಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಕಾರಣ?:ಹೊಸ ವರ್ಷಾಚರಣೆ ಸಲುವಾಗಿ ಪ್ರದೀಪ್ ಕುಟುಂಬ ಸಮೇತ ರಾಮನಗರದ ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್‌ಗೆ ಬಂದಿದ್ದರು. ರಾತ್ರಿ ಪಾರ್ಟಿ ಮಾಡಿದ ಬಳಿಕ ಬೆಳಗ್ಗೆ ಶಿರಾಗೆ ಹೋಗಬೇಕು ಎಂದು ಹೇಳಿ ರೆಸಾರ್ಟ್‌ನಿಂದ ಭಾನುವಾರ ಬೆಳಗ್ಗೆ ಒಬ್ಬರೇ ಹೋಗಿದ್ದಾರೆ. ನಂತರ ಬೆಂಗಳೂರಿನಲ್ಲಿನ ತಮ್ಮ ನಿವಾಸಕ್ಕೆ ತೆರಳಿ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ.

ಪಾಲುದಾರಿಕೆ ಹೆಸರಿನಲ್ಲಿ ಮೋಸ?: ಬಳಿಕ ರೆಸಾರ್ಟ್‌ಗೆ ವಾಪಸ್ ಬರುವಾಗ ಕಾರಿನಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ಕಾರಣ ಉಲ್ಲೇಖಿಸಿರುವ ಪ್ರದೀಪ್, ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಬಳಿ ರೆಸಾರ್ಟ್ ತೆರೆಯಲು 5 ಮಂದಿ ನನ್ನ ಬಳಿ ಮಾತನಾಡಿ, ಒಂದೂವರೆ ಕೋಟಿ ರೂ. ಹಣ ಪಡೆದುಕೊಂಡಿದ್ದರು. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರಾಟ ಮಾಡಿದ್ದೆ. ಅಲ್ಲದೇ ಇದಕ್ಕಾಗಿ ನಾನು ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಆದರೆ, ಪಾಲುದಾರಿಕೆ ಹೆಸರಿನಲ್ಲಿ ನನಗೆ ಮೋಸ ಮಾಡಿದ್ದಾರೆ. ಒಟ್ಟು ಎರಡೂವರೆ ಕೋಟಿ ಹಣ ನನಗೆ ಬರಬೇಕು ಎಂದು ಬರೆದಿದ್ದಾರೆ.

ಈ ನಡುವೆ ರಾಜಕಾರಣಿಯೊಬ್ಬರು ರಾಜಿ ಮಾಡುವ ಪ್ರಯತ್ನ ಮಾಡಿದ್ದರು. ಆದರೂ ನನಗೆ ಪೂರ್ಣ ಹಣ ನೀಡದೇ ಮೋಸ ಮಾಡಲಾಗಿದೆ. ಈ ಬಗ್ಗೆ ಕೇಳಿದರೆ ಆ ರಾಜಕಾರಣಿಯವರು ಸಹ ನನಗೆ ಸಹಾಯ ಮಾಡಿಲ್ಲ. ಹೀಗಾಗಿ ನನ್ನ ಸಾವಿಗೆ ಈ 6 ಮಂದಿ ಕಾರಣ, ಎಲ್ಲರಿಗೂ ಶಿಕ್ಷೆ ಆಗಬೇಕು ಎಂದು ಪ್ರದೀಪ್ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಪತ್ನಿ ದೂರು: ಇದೀಗ ಮೃತ ಉದ್ಯಮಿ ಪತ್ನಿ ನೀಡಿದ ದೂರಿನನ್ವಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಈ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆರು ಆರೋಪಿಗಳೆಲ್ಲರಿಗೂ ನೋಟಿಸ್ ನೀಡಿ ಪೊಲೀಸರು ವಿಚಾರಣೆಗೆ ಕರೆಸಿಕೊಳ್ಳವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ನೆಟ್ಟಿಗೆರೆ ಗ್ರಾಮದ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕಗ್ಗಲಿಪುರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಮಾಜಿ ಸಚಿವರ ಪ್ರತಿಕ್ರಿಯೆ:ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ ಮಾಜಿ ಸಚಿವ, ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರು, ಪ್ರದೀಪ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ನಮ್ಮ ಕಾರ್ಯಕರ್ತರೇ. ಅವರ ಆತ್ಮಹತ್ಯೆಗೆ ಕಾರಣ ಏನೆಂಬುದರ ತನಿಖೆಯಾಗಲಿ. ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಚುನಾವಣೆಯಲ್ಲಿ ಸೋಷಿಯಲ್ ಮೀಡಿಯಾ ಗುತ್ತಿಗೆ ಪಡೆದಿದ್ದರು. ನಂತರ ಪ್ರದೀಪ್ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ ಮತ್ತು ಜುಲೈನಲ್ಲಿ ನಮ್ಮ ಪಕ್ಷದ ಕಚೇರಿಗೆ ಬಂದಿದ್ದು, ನನ್ನ ಜನತಾ ದರ್ಶನದಲ್ಲಿ ನನ್ನನ್ನು ಭೇಟಿಯಾಗಿ ನನಗೆ ಸಮಸ್ಯೆಯಾಗಿದೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು.

ಬಳಿಕ ಪ್ರದೀಪ್ ನೀಡಿದ್ದ ದೂರವಾಣಿ ಸಂಖ್ಯೆಗೆ ಫೋನ್ ಮಾಡಿ ಹಣ ನೀಡುವಂತೆ ಹೇಳಿದೆ. ಕೋವಿಡ್ ಹಿನ್ನೆಲೆಯಲ್ಲಿ ಸ್ವಲ್ಪ ಸಮಯ ನೀಡುವಂತೆ ಅವರ ಸ್ನೇಹಿತರು ಹೇಳಿದ್ದರಿಂದ ಸಮಯ ಕೇಳಿದ್ದೆ. ನಂತರ ಫೋನ್ ಮಾಡಿ ಕೂಡಲೇ ಹಣ ನೀಡುವಂತೆಯೂ ಹೇಳಿದ್ದೆ. ಆಗ ಪರಸ್ಪರ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದೆ ಎಂದು ವಿವರಿಸಿದರು.

ಕೌಟುಂಬಿಕ ಕಲಹ:ಒಮ್ಮೆ ಭೂಮಿ ಪೂಜೆಯಲ್ಲಿ ಪ್ರದೀಪ್ ನನ್ನನ್ನು ಭೇಟಿಯಾಗಿದ್ದರು. ಆಗ ಸಮಸ್ಯೆ ಬಗೆಹರಿದಿದೆ ಎಂದು ನನಗೆ ಥ್ಯಾಂಕ್ಸ್ ಸಹ ಹೇಳಿದ್ದರು. ಬಳಿಕ ಕೌಟುಂಬಿಕ ಕಲಹದ ಬಗ್ಗೆಯೂ ನನಗೆ ಮಾಹಿತಿ ನೀಡಿದ್ದರು. ಬೆಳ್ಳಂದೂರು ಠಾಣೆಗೆ ಪತ್ನಿ ದೂರು ನೀಡಿದ್ದರಿಂದ ಬಗ್ಗೆಯೂ ನನ್ನ ಬಳಿ ಹೇಳಿಕೊಂಡಿದ್ದರು. ತಕ್ಷಣ ಇನ್ಸ್​ಪೆಕ್ಟರ್​​​ಗೆ ಫೋನ್ ಮಾಡಿ ಮಾಹಿತಿ ಪಡೆದುಕೊಂಡಿದ್ದೆ. ಪತ್ನಿ ಒಪ್ಪಿದರೆ ಸಮಸ್ಯೆ ಬಗೆಹರಿಸುವಂತೆ ಇನ್ಸ್​ಪೆಕ್ಟರ್​​​ಗೆ ಹೇಳಿದ್ದೆ. ಕೌಟುಂಬಿಕ ಕಲಹದ ಪ್ರಕರಣವನ್ನು ರಾಜಿ ಮಾಡಿಸಿದ್ದು ನಿಜ. ಆದರೆ, ಈ ಘಟನೆಗಳು ಆದ ಬಳಿಕ ಮತ್ತೆ ಭೇಟಿಯಾಗಿರಲಿಲ್ಲ ಎಂದು ಲಿಂಬಾವಳಿ ಹೇಳಿದರು.

ಸಮಸ್ಯೆ ಹೇಳಿಕೊಂಡು ಜನಪ್ರತಿನಿಧಿಗಳು ನನ್ನ ಬಳಿ ಬರುವುದು ಸಹಜ. ಆದರೆ, ಪ್ರದೀಪ್ ಆತ್ಮಹತ್ಯೆ ಹಂತಕ್ಕೆ ಹೋಗಿದ್ದು ವಿಷಾದನೀಯ ಎಂದು ಲಿಂಬಾವಳಿ ಹೇಳಿದರು.

ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿಲ್ಲ:ಪ್ರದೀಪ್ ಡೆತ್ ನೋಟ್​​​ನಲ್ಲಿ ನನ್ನ ಹೆಸರು ಉಲ್ಲೇಖಿಸಿದ್ದಾರೆ. ಈ ಪ್ರಕರಣದ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಇಂತಹ ವಿಚಾರದಲ್ಲಿ ಸಹಾಯ ಮಾಡುವಾಗ ಎಚ್ಚರಿಕೆಯಿಂದ ಇರಿ ಎಂದು ಜನಪ್ರತಿನಿಧಿಗಳಿಗೆ ನಾನು ಸಲಹೆ ನೀಡುತ್ತೇನೆ. ಅನ್ಯಾಯವಾಗಿದೆ ಎಂದು ಯಾರೇ ಬಂದರೂ ಸಹಾಯ ಮಾಡುತ್ತೇನೆ. ಇನ್ನು ಡೆತ್ ನೋಟ್​​ನಲ್ಲಿ ಉಲ್ಲೇಖಿಸಿರುವ ಉಳಿದ ಆರೋಪಿಗಳ ಪರಿಚಯ ಸಹ ಇದೆ. ನಾನು ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿಲ್ಲ. ಕೇವಲ ಫೋನ್​ನಲ್ಲಿ ಚರ್ಚೆ ಮಾಡಿದ್ದೇನೆ. ವ್ಯವಹಾರ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದು ನಿಜ ಎಂದರು.

ಸೂಕ್ತ ತನಿಖೆ ನಡೆಯಬಹುದೆಂದು ನನ್ನ ಹೆಸರು ಉಲ್ಲೇಖಿಸಿರಬಹುದು. ಕೌಟುಂಬಿಕ ಕಲಹದ ವಿಚಾರದಲ್ಲಿ ಒಮ್ಮೆ ಮಧ್ಯರಾತ್ರಿ ಫೋನ್ ಮಾಡಿದರು. ಆಗಲೂ ನಾನು ಸಹಾಯ ಮಾಡಿದ್ದೇನೆ. ನನ್ನ ಹೆಸರು ಈ ಪ್ರಕರಣದಲ್ಲಿ ಸೇರಿಸಿದ್ದಕ್ಕೆ ಮಹತ್ವ ಸಿಕ್ಕಿದೆ. ಸಂಧಾನದ ಹೆಸರಿನಲ್ಲಿ ನನಗೆ ಹಣ ಕೊಟ್ಟಿದ್ದಾರೆ ಎಂಬುದು ಸುಳ್ಳು ಎಂದು ಲಿಂಬಾವಳಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ರಾಮನಗರ: ಡೆತ್ ನೋಟ್ ಬರೆದಿಟ್ಟು ಕಾರಿನಲ್ಲೇ ಉದ್ಯಮಿ ಆತ್ಮಹತ್ಯೆ

Last Updated : Jan 2, 2023, 7:48 PM IST

ABOUT THE AUTHOR

...view details