ರಾಮನಗರ:ಲವ್ ಯೂ ರಚ್ಚು ಚಿತ್ರದ ಚಿತ್ರೀಕರಣದ ವೇಳೆ ಸಾಹಸ ನಟನ ಸಾವು ಪ್ರಕರಣ ಸಂಬಂಧ ಬಿಡದಿ ಪೊಲೀಸ್ ಠಾಣೆಗೆ ನಟಿ ರಚಿತಾ ರಾಮ್ ಆಗಮಿಸಿದ್ದರು.
ಅವಘಡ ನಡೆದ ಸಮಯದಲ್ಲಿ ನಾನು ಸ್ಥಳದಲ್ಲಿರಲಿಲ್ಲ ಎಂದ ರಚಿತಾರಾಮ್ ಇತ್ತೀಚಿಗೆ ಸಿನಿಮಾ ಚಿತ್ರೀಕರಣದ ವೇಳೆ ಶಾರ್ಟ್ ಸರ್ಕ್ಯೂಟ್ನಿಂದ ಫೈಟರ್ ವಿವೇಕ್ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಡದಿ ಪೊಲೀಸ್ ಠಾಣೆಯಲ್ಲಿ ಲವ್ ಯು ರಚ್ಚು ನಿರ್ದೇಶಕ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ.
ಈ ವಿಚಾರವಾಗಿ ನಟಿ ರಚಿತಾ ರಾಮ್ ಅವರನ್ನು ರಾಮನಗರ ಡಿವೈಎಸ್ಪಿ ಮೋಹನ್ ವಿಚಾರಣೆ ನಡೆಸಿ, ಚಿತ್ರೀಕರಣ ಸಂದರ್ಭದಲ್ಲಾದ ದುರಂತದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗ್ತಿದೆ.
ವಿಚಾರಣೆಗೆ ಹಾಜರಾದ ಬಳಿಕ ಮಾತನಾಡಿದ ನಟಿ ರಚಿತಾ ರಾಮ್, ಇಂದು ನಾನು ವಿಚಾರಣೆಗೆ ಬಂದಿದ್ದೇನೆ. ಅವಘಡ ನಡೆದ ಸಂದರ್ಭದಲ್ಲಿ ನಾನು ಸ್ಥಳದಲ್ಲಿರಲಿಲ್ಲ. ಮೀಡಿಯಾ, ಸೋಷಿಯಲ್ ಮೀಡಿಯಾ ಮೂಲಕ ಸುದ್ದಿ ತಿಳಿಯಿತು. ಹಾಗಾಗಿ ಇಷ್ಟೇ ವಿಚಾರವನ್ನ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ದುರಂತದ ಸಂದರ್ಭದಲ್ಲಿ ಫೈಟರ್ ವಿವೇಕ್ ಸಾವಿನ ವಿಚಾರ ತಿಳಿಯಿತು ಅಷ್ಟೇ. ಆದರೆ ಹೇಗಾಯಿತು ಎಂಬುದು ನನಗೆ ಗೊತ್ತಿಲ್ಲ. ನಾನು ಸ್ಥಳದಲ್ಲಿರಲಿಲ್ಲ. ನಾನು ಹಳೇ ಶೆಡ್ಯೂಲ್ನಲ್ಲಿದ್ದೆ. ಆದರೆ, ಇದು ಹೊಸ ಶೆಡ್ಯೂಲ್ ಶೂಟಿಂಗ್ನಲ್ಲಿ ಭಾಗಿಯಾಗಿರಲಿಲ್ಲ.
ಇದನ್ನೂ ಓದಿ: ಫೈಟರ್ ವಿವೇಕ್ ಸಾವು ಪ್ರಕರಣ: ಪರಿಹಾರ ನೀಡದ 'ಲವ್ ಯೂ ರಚ್ಚು' ಚಿತ್ರತಂಡ
ಚಿತ್ರದ ಫೈಟಿಂಗ್ ಸೀ್ನ್ನಲ್ಲಿ ಹೀರೋಯಿನ್ಸ್ಗೆ ಕೆಲಸ ಇರೋದಿಲ್ಲ. ಹಾಗಾಗಿ ಯಾವ ರೀತಿಯ ಶೂಟ್ ಕಂಪೋಸ್ ಮಾಡಿದ್ದರು ಎಂಬ ಮಾಹಿತಿ ನನಗೆ ಇಲ್ಲ. ಇದರಲ್ಲಿ ನಿರ್ಲಕ್ಷ್ಯ ಮಾಡೋದು, ಉದ್ದೇಶಪೂರ್ವಕವಾಗಿ ಮಾಡೋದಿಲ್ಲ. ಅದೊಂದು ಅನಾಹುತ ಆಗೋಗಿದೆ ಅದಕ್ಕೆ ತುಂಬಾ ಬೇಸರವಿದೆ ಎಂದರು.