ರಾಮನಗರ: ಕನಕಪುರ ತಾಲೂಕಿನ ಗ್ರಾಮದೇವತೆಯ ಕೆಂಡೋತ್ಸವ ಜರುಗುವ ಮುನ್ನವೇ ಕಳಸ ಹೊತ್ತು ಮೆರವಣಿಗೆಯಲ್ಲಿ ತೆರಳುತ್ತಿದ್ದ ಅರ್ಚಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಮಾವತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾವತ್ತೂರು ಗ್ರಾಮದ ಮಾವತ್ತೂರಮ್ಮ ದೇವಿಯ ಅರ್ಚಕರಾಗಿದ್ದ ನಾಗರಾಜು ಎಂಬುವವರು ಸಾವನ್ನಪ್ಪಿದ್ದಾರೆ.
ಇಂದು ಗ್ರಾಮದಲ್ಲಿ ಕೊಂಡೋತ್ಸವ ನಡೆಯಬೇಕಿತ್ತು. ಕೆಂಡ ಹಾಯುವುದಕ್ಕೆ ಕಳಸ ಹೊತ್ತು ಮೆರವಣಿಗೆ ಮೂಲಕ ಅರ್ಚಕರು ದೇವಾಲಯದ ಬಳಿ ಹೋಗುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ವಿಚಿತ್ರವಾಗಿ ಕುಣಿಯಲಾರಂಭಿಸಿದ್ದರು. ಈ ಸಂದರ್ಭದಲ್ಲಿ ಅರ್ಚಕ ನಾಗರಾಜು ಮಹಿಳೆಗೆ ಬೆತ್ತದಿಂದ ಹೊಡೆದಿದ್ದಾರೆ. ಆ ತಕ್ಷಣವೇ ನಾಗರಾಜು ದಿಢೀರ್ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ :ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕೆಆರ್ಪಿಪಿ ಸಂಸ್ಥಾಪಕ ಸೇರಿ ಐದು ಜನರ ಮೇಲೆ ಪ್ರಕರಣ ದಾಖಲು
ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ - ಮೆರವಣಿಗೆ ವೇಳೆಯೇ ಕುಸಿದು ಬಿದ್ದಿದ್ದ ಅರ್ಚಕ ನಾಗರಾಜು ಅವರನ್ನು ತಕ್ಷಣವೇ ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸಲು ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆಯೇ ನಾಗರಾಜು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಅರ್ಚಕರ ಸಾವಿನಿಂದ ಮಾವತ್ತೂರಮ್ಮ ದೇವಿಯ ಜಾತ್ರೆ ಅರ್ಧಕ್ಕೆ ನಿಂತಿದ್ದು, ಭಕ್ತರು ಕೂಡ ನಿರಾಸೆಯಿಂದ ತಮ್ಮ ಗ್ರಾಮದತ್ತ ತೆರಳಿದ್ದಾರೆ.
ಇದನ್ನೂ ಓದಿ :ಮತದಾರರಿಗೆ ಹಂಚಲು ಫುಡ್ ಕಿಟ್ ಸಂಗ್ರಹ ಆರೋಪ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಎಫ್ಐಆರ್
ನೇಮದ ವೇಳೆಯೇ ಕುಸಿದು ಬಿದ್ದು ಮೃತಪಟ್ಟ ದೈವ ನರ್ತಕ: ಇತ್ತೀಚೆಗೆ ದೈವ ನರ್ತನ ಮಾಡುತ್ತಿರುವಾಗಲೇ ದೈವ ನರ್ತಕರೊಬ್ಬರು ಕುಸಿದು ಬಿದ್ದು ಇಹಲೋಕ ತ್ಯಜಿಸಿರುವ ಘಟನೆ ಕಡಬ ಸಮೀಪದ ಎಡಮಂಗಲ ಗ್ರಾಮದಲ್ಲಿ ( ಮಾರ್ಚ್ 30-2023) ಬೆಳಗಿನ ಜಾವ ನಡೆದಿತ್ತು. ಕಡಬದಲ್ಲಿ ದೈವ ನರ್ತಕರಾಗಿ ಹೆಸರುವಾಸಿಯಾಗಿದ್ದ ಕಾಂತು ಅಜಿಲ ಮೂಲಂಗೀರಿ ಮೃತರು ಎಂಬುದು ತಿಳಿದು ಬಂದಿತ್ತು. ಹಲವು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿನ ದೈವಾರಾಧಕರಾಗಿ ಹಾಗೂ ಗ್ರಾಮದೈವಗಳ ಪರಿಚಾರಕರಾಗಿ ಇವರು ಸೇವೆ ಸಲ್ಲಿಸುತ್ತಿದ್ದರು ಎಂಬುದಾಗಿ ತಿಳಿದುಬಂದಿತ್ತು.
ಇದನ್ನೂ ಓದಿ :ಟೈರ್ ಸ್ಫೋಟಗೊಂಡು ದ್ವಿಚಕ್ರ ವಾಹನ ಅಪಘಾತ: ಅರ್ಧ ಹೆಲ್ಮೆಟ್ ಧರಿಸಿದ್ದ ಟೆಕ್ಕಿ ಯುವತಿ ಸಾವು
ಸ್ಥಳೀಯರ ಮೊಬೈಲ್ನಲ್ಲಿ ದೃಶ್ಯ ಸೆರೆ:(ಮಾರ್ಚ್ 30)ರ ಬೆಳಗಿನ ಜಾವ ಎಡಮಂಗಲ ಗ್ರಾಮದ ಇಡ್ಯಡ್ಕ ಎಂಬಲ್ಲಿ ನೇಮೋತ್ಸವ ನಡೆಯುತ್ತಿತ್ತು. ದೈವನರ್ತಕರು ನರ್ತನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ನರ್ತಕರು ಏಕಾಏಕಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿತ್ತು. ನೇಮೋತ್ಸವಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರ ಮೊಬೈಲಿನಲ್ಲಿ ಕುಸಿದು ಬೀಳುತ್ತಿರುವ ದೃಶ್ಯ ಸೆರೆಯಾಗಿತ್ತು. ಕಾಂತು ಅವರು ಹೃದಯಾಘಾತಕ್ಕೆ ಒಳಗಾಗಿರಬಹುದೆಂದು ಅಂದಾಜಿಸಲಾಗಿತ್ತು.
ಇದನ್ನೂ ಓದಿ :ನೇಮ ನಡೆಯುತ್ತಿರುವಾಗಲೇ ಕುಸಿದುಬಿದ್ದು ಮೃತಪಟ್ಟ ದೈವನರ್ತಕ!