ಸ್ವಾಭಿಮಾನ ಸಂಕಲ್ಪ ನಡಿಗೆ ಆರಂಭ ರಾಮನಗರ :ನಾನು ಶಾಸಕನಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೆ. ಈ ಕ್ಷೇತ್ರಕ್ಕೆ ನೀರಾವರಿ ತಂದವನು ನಾನು. ನನ್ನನ್ನು ಚುನಾವಣೆಯಲ್ಲಿ ಯಾಕೆ ಸೋಲಿಸಿದ್ದೀರಿ ಎಂದು ಜನರನ್ನು ಪ್ರಶ್ನೆ ಮಾಡಬೇಕಿದೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸ್ವಾಭಿಮಾನ ಸಂಕಲ್ಪ ನಡಿಗೆ ಆರಂಭ ಮಾಡಿದ್ಧಾರೆ. ಮಾಜಿ ಸಿಎಂ ಕುಮಾರಸ್ವಾಮಿ ಮಣಿಸಲು ತಾಲೂಕಿನ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಬಳಿಕ ಯೋಗೇಶ್ವರ್ ಮಾತನಾಡಿದರು.
ಕಳೆದ 25 ವರ್ಷಗಳಿಂದ ಇಲ್ಲೇ ನನ್ನ ರಾಜಕೀಯ ಜೀವನ ಆರಂಭವಾಗಿದ್ದು, ನಾನು ಇದೇ ತಾಲೂಕಿನವನು, ಇದೇ ಮಣ್ಣಿನ ಮಗ ನನ್ನನ್ನು ಯಾಕೆ ಚುನಾವಣೆಯಲ್ಲಿ ಸೋಲಿಸಿದ್ದೀರಿ ಎಂದು ಜನರ ಬಳಿ ಉತ್ತರ ಪಡೆಯಲು ಸ್ವಾಭಿಮಾನಿ ಯಾತ್ರೆ ಕೈಗೊಂಡಿದ್ದೇನೆ. ಎರಡು ತಿಂಗಳ ಕಾಲ ಇಡೀ ಕ್ಷೇತ್ರದ ಮನೆಮನೆಗೆ ತೆರಳುತ್ತೇನೆ. ಕುಮಾರಸ್ವಾಮಿ ಅವರ ದುರಾಡಳಿತದ ಬಗ್ಗೆ ಮನವರಿಕೆ ಮಾಡುತ್ತೇನೆ. ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಏನು.? ಅವರು ಎಷ್ಟು ದಿನ ಬಂದಿದ್ದಾರೆ ಎಂಬುದರ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದರು.
ರಾಮನಗರಕ್ಕೆ ಹೆಚ್ಡಿಕೆ ಕೊಡುಗೆ ಏನು? :ಇದಲ್ಲದೆ, ಚನ್ನಪಟ್ಟಣಕ್ಕೆ 1500 ಕೋಟಿ ತಂದಿದ್ದೇವೆ ಅಂತ ಹೆಚ್ಡಿಕೆ ಹೇಳಿದ್ದಾರೆ. ಆದರೆ ಆ ಹಣ ಏನಾಯ್ತು, ಜನರ ಕಣ್ಣಿಗೆ ಕಾಣುತ್ತಿಲ್ಲ. 150ಕೋಟಿಯ ಅಭಿವೃದ್ಧಿಯನ್ನೂ ಮಾಡಿಲ್ಲ. ಹಾಗಾದರೆ ತಾಲೂಕಿನಲ್ಲಿ ಕುಮಾರಸ್ವಾಮಿ ಏನು ಅಭಿವೃದ್ಧಿ ಮಾಡಿದ್ದಾರೆ? ಅವರನ್ನೇ ಕೇಳಬೇಕು ಎಂದು ಹೆಚ್ಡಿಕೆ ವಿರುದ್ದ ಯೋಗೇಶ್ವರ್ ಗುಡುಗಿದರು.
ತಾಲೂಕಿನ ರಸ್ತೆಗಳೆಲ್ಲ ಗುಂಡಿಬಿದ್ದಿವೆ. ನಗರದಲ್ಲಿ ಯುಜಿಡಿ ನಿರ್ಮಾಣ ಆಗಿಲ್ಲ. ತಾಲೂಕು ಕೇಂದ್ರದಲ್ಲಿ ಒಂದೂ ಸುಸಜ್ಜಿತ ಸರ್ಕಾರಿ ಕಟ್ಟಡ ಕಟ್ಟಿಲ್ಲ ಎಂದು ಶಾಸಕ ಕುಮಾರಸ್ವಾಮಿ ವಿರುದ್ಧ ಸಿ ಪಿ ಯೋಗೇಶ್ವರ್ ವಾಗ್ದಾಳಿ ನಡೆಸಿದರು. ನನ್ನ ವರ್ಚಸ್ಸು, ಪಕ್ಷದ ವರ್ಚಸ್ಸು ಎರಡೂ ಒಂದೆಯಾಗಿದೆ. ಪಕ್ಷವನ್ನು ಬಲಿಷ್ಠ ಮಾಡುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಸಂಚಾರ ಮಾಡುತ್ತಿದ್ದೇನೆ ಎಂದರು.
ಹಾಗೆಯೇ ನಿನ್ನೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬಂದಾಗ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ನನ್ನ ಹಾಗೂ ರಾಜ್ಯ ನಾಯಕರ ನಡುವೆ ಯಾವುದೇ ಅಂತರ ಇಲ್ಲ. ಚುನಾವಣೆ ಹಿನ್ನೆಲೆ ರಾಜ್ಯದ ಎಲ್ಲಾ ಭಾಗಗಳಲ್ಲಿ ನಾಯಕರು ಪ್ರವಾಸ ಮಾಡುತ್ತಿದ್ದಾರೆ. ನಿನ್ನೆ ಕೂಡಾ ಸಿಎಂ ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದೇನೆ. ಈ ಬಾರಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ. ಈಗಾಗಲೇ ಕೇಂದ್ರ ಗೃಹಸಚಿವ ಅಮಿಶ್ ಶಾ ಕೂಡಾ ಇದನ್ನ ಸ್ಪಷ್ಟಪಡಿಸಿದ್ದಾರೆ ಎಂದರು.
ಇಂದು ಕೇಂದ್ರ ಬಜೆಟ್ ಘೋಷಣೆ ವಿಚಾರವಾಗಿ ಮಾತನಾಡಿ ಅವರು, ಸಾಮಾನ್ಯವಾಗಿ ರಾಜ್ಯಕ್ಕೆ ಹೆಚ್ಚು ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚು ಒತ್ತು ನೀಡಿದೆ. ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಅಭಿವೃದ್ಧಿ ಮಾಡುತ್ತಾರೆ. ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತದೆ ಎಂದು ಸಿ.ಪಿ.ಯೋಗೇಶ್ವರ್ ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ :ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ನೀಡಿದರೆ ಅಡ್ಡಿ ಪಡಿಸುತ್ತಾರೆ: ಸಿ.ಪಿ ಯೋಗೇಶ್ವರ್