ಕರ್ನಾಟಕ

karnataka

ETV Bharat / state

ಸೈನಿಕನ ಕೈ ತಪ್ಪಿದ ಸಚಿವ ಸ್ಥಾನ: ಯಡಿಯೂರಪ್ಪ ಕೆಂಗಣ್ಣಿಗೆ ಗುರಿಯಾದ್ರಾ ಸಿಪಿವೈ? - ನೂತನ ಸಚಿವರು

ಈ ಹಿಂದೆ ಸಚಿವರಾಗಿದ್ರು ಕೂಡ ನೇರವಾಗಿಯೇ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡು ಸಿಪಿವೈ ಬಹಿರಂಗವಾಗಿಯೇ ಮಾತನಾಡುತ್ತಿದ್ದರು. ಸದ್ಯ ಬೊಮ್ಮಾಯಿ ಸಂಪುಟದಲ್ಲಿ ಅವರಿಗೆ ಕೊಕ್​ ನೀಡಲಾಗಿದ್ದು, ಯೋಗೇಶ್ವರ್​ ಯಡಿಯೂರಪ್ಪನವರ ಕೆಂಗಣ್ಣಿಗೆ ಗುರಿಯಾದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

cpy
ಮಾಜಿ ಸಚಿವ ಸಿ ಪಿ ಯೋಗೇಶ್ವರ್​

By

Published : Aug 4, 2021, 4:36 PM IST

ರಾಮನಗರ:ಕಾಂಗ್ರೆಸ್‌- ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚನ್ನಪಟ್ಟಣ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್​ಗೆ ಮಂತ್ರಿ ಸ್ಥಾನ ಕೈ ತಪ್ಪಿದೆ. ಮಾಜಿ ಸಿಎಂ ಯಡಿಯೂರಪ್ಪ ಕೆಂಗಣ್ಣಿಗೆ ಗುರಿಯಾಗಿ ಈ ನಾಯಕನಿಗೆ ಸಚಿವ ಸ್ಥಾನ ಕೈ ತಪ್ಪಿತೆ? ಎಂಬ ಅನುಮಾನ ಮೂಡಿಸಿದೆ. ಕಡೆ ಕ್ಷಣದವರೆಗೂ ಇದ್ದ ಹೆಸರು ಸಚಿವರ ಪ್ರಮಾಣವಚನ ಸ್ವೀಕರಿಸುವ ಲಿಸ್ಟ್​​ನಲ್ಲಿ ಮಾತ್ರ ಕಣ್ಮರೆಯಾಗಿದೆ.

ಅತೃಪ್ತ ಕಾಂಗ್ರೆಸ್​ ಹಾಗೂ ಜೆಡಿಎಸ್ ಶಾಸಕರನ್ನ ಮುಂಬೈಗೆ ಕರೆದುಕೊಂಡು ಹೋಗಿ ಕಾರ್ಯತಂತ್ರ ರೂಪಿಸಿ ಅಂತಿಮವಾಗಿ ಮೈತ್ರಿ ಸರ್ಕಾರ ಬೀಳಿಸುವಲ್ಲಿ ಸಿಪಿಐ ಯಶಸ್ವಿ ಕೂಡ ಆಗಿದ್ರು. ನಂತರ ಭಾರಿ ಕಸರತ್ತು ಮಾಡಿ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಬಿಜೆಪಿ ಹೈಕಮಾಂಡ್ ಸಹಕಾರದೊಂದಿಗೆ ಸಚಿವ ಸ್ಥಾನ‌ ಪಡೆದು ಪ್ರವಾಸೋದ್ಯಮ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗುವ ನಿರೀಕ್ಷೆಗಳಿದ್ದವು. ಆದರೆ ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನ ಕೈತಪ್ಪಿದೆ.

ಯಡಿಯೂರಪ್ಪ ಕೆಂಗಣ್ಣಿಗೆ ಗುರಿಯಾದ್ರಾ ಸಿಪಿವೈ :

ಈ ಹಿಂದೆ ಸಚಿವರಾಗಿದ್ರು ಕೂಡ ನೇರವಾಗಿಯೇ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡು ಸಿಪಿವೈ ಬಹಿರಂಗವಾಗಿಯೇ ಮಾತನಾಡುತ್ತಿದ್ದರು. ಇದಲ್ಲದೆ ದೆಹಲಿಗೆ ಹೋಗಿ ಬಿಜೆಪಿ ಹೈಕಮಾಂಡ್​ಗೆ ಸಿಎಂ ಯಡಿಯೂರಪ್ಪ ವಿರುದ್ಧ ದೂರು ನೀಡಿ ಸಿಎಂ ಬದಲಾವಣೆಗೆ ಭಾರಿ ಒತ್ತಡ ಹೇರಿದ್ದರು ಎನ್ನಲಾಗ್ತಿದೆ.

ಮಾಜಿ ಸಚಿವ ಸಿ ಪಿ ಯೋಗೇಶ್ವರ್​

ಇದರಿಂದ ಸಿಎಂ ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಸಿ ಪಿ ಯೋಗೇಶ್ವರ್​ಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದ್ದವು. ತಮ್ಮ ವಿರುದ್ಧ ದನಿ‌ ಎತ್ತಿದ ಸಿ ಪಿ ಯೋಗೇಶ್ವರ್​ಗೆ ಯಾವುದೇ ಕಾರಣಕ್ಕೂ ಮಂತ್ರಿ ಮಾಡದಂತೆ ಖಡಕ್ ಆಗಿ ಮಾಜಿ‌ ಸಿಎಂ ಯಡಿಯೂರಪ್ಪ ತಿಳಿಸಿದ್ದರು ಎನ್ನಲಾಗಿದೆ. ನನ್ನ ವಿರುದ್ಧ ನೇರವಾಗಿ ಹೈಕಮಾಂಡ್​ಗೆ ಸಿಪಿವೈ ದೂರು ನೀಡಿದ್ದಾರೆಂಬ ಅಸಮಾಧಾನದಿಂದ ಯಡಿಯೂರಪ್ಪನವರ ಕೆಂಗಣ್ಣಿಗೆ ಗುರಿಯಾಗಿದ್ದು, ಇದು ಸಿಪಿವೈಗೆ ಸಚಿವ ಸ್ಥಾನ ತಪ್ಪಿಸಲು ಕಾರಣ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಒಟ್ಟಾರೆ ಯೋಗೇಶ್ವರ್​ ಅಂತಿಮ‌ ಹಂತದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದಿರುವ ನಾಲ್ಕು ಸಚಿವ ಸ್ಥಾನಕ್ಕೆ ದೆಹಲಿಯ ಹೈಕಮಾಂಡ್​ನಲ್ಲಿ ಲಾಬಿ ನಡೆಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details