ರಾಮನಗರ:ಜಮೀನಿನಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಮೃತಪಟ್ಟ ಆನೆಯನ್ನು ಜಮೀನಿನಲ್ಲಿಯೇ ಗುಂಡಿ ತೋಡಿ ಮಣ್ಣು ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಕನಕಪುರ ತಾಲೂಕಿನ ಸಂತೆಕೋಡಿಹಳ್ಳಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಸುಮಾರು 15 ವರ್ಷದ ಗಂಡಾನೆಯೊಂದು ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿತ್ತು. ಬಳಿಕ ಆನೆ ಮೃತಪಟ್ಟಿರುವುದನ್ನು ಕಂಡ ಆರೋಪಿಗಳು ಸ್ಥಳದಲ್ಲಿಯೇ ಗುಂಡಿ ತೆಗೆದು ಹೂತು ಹಾಕಿದ್ದಾರೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಸಂತೇಕೋಡಹಳ್ಳಿಯ ನಂಜೇಗೌಡ ಎಂಬವರಿಗೆ ಸೇರಿದ್ದ ಜಮೀನನ್ನು ಪಿಳ್ಳೇಗೌಡ ಎಂಬವರು ಬೋಗ್ಯಕ್ಕೆ ಪಡೆದುಕೊಂಡು ವ್ಯವಸಾಯ ಮಾಡುತ್ತಿದ್ದರು. ಆನೆಗಳ ಹಾವಳಿ ಹೆಚ್ಚಿದ ಕಾರಣ ಬೆಳೆಗಳ ರಕ್ಷಣೆಗಾಗಿ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿದ್ದರು. ಕಳೆದ ಮೂರು ದಿನಗಳ ಹಿಂದೆ ವಿದ್ಯುತ್ ಸ್ಫರ್ಶಿಸಿ ಆನೆ ಮೃತಪಟ್ಟಿದೆ. ಈ ವೇಳೆ ಅರಣ್ಯ ಇಲಾಖೆಗೆ ಸಿಕ್ಕಿಬೀಳುವ ಭಯದಲ್ಲಿ ಜೆಸಿಬಿ ಮೂಲಕ ಆನೆಯನ್ನು ಸ್ಥಳದಲ್ಲಿಯೇ ಹೂಳಿ, ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ದೊರೆತಿದ್ದು, ಸ್ಥಳ ಪರಿಶೀಲನೆ ನಡೆಸಿದಾಗ ಘಟನೆ ನಡೆದಿರುವುದು ಕಂಡುಬಂದಿದೆ. ನಂತರ ಆನೆಯನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿದ್ಯುತ್ ಶಾಕ್‌ನಿಂದ ಆನೆ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನಂತರ ದಂತವನ್ನು ಬೇರ್ಪಡಿಸಿ ಅದೇ ಜಾಗದಲ್ಲಿ ಆನೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.