ರಾಮನಗರ: ಜಿಲ್ಲೆಯ ಚೆನ್ನ ತಾಲೂಕಿನ ದೊಡ್ಡನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳು ಕಂಡುಬಂದಿವೆ. ಇವುಗಳನ್ನು ಕಾಡಿಗೆ ಓಡಿಸುವಾಗ ಮಾವು ಹಾಗೂ ತೆಂಗಿನ ಮರಗಳಿಗೆ ಹಾನಿಯಾಗಿದೆ.
ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳು ಕಬ್ಬಾಳು ವಲಯದಲ್ಲಿ ಬೀಡುಬಿಟ್ಟಿವೆ. ಈ ಗಜಪಡೆ ಪ್ರತಿದಿನ ಕಬ್ಬಾಳು ವಲಯದ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿವೆ. ಆದರೆ, ಅರಣ್ಯ ಇಲಾಖೆ ಒಂದು ಮಾವಿನ ಮರಕ್ಕೆ ಕೇವಲ 100-200 ರೂಪಾಯಿ ಪರಿಹಾರ ನೀಡುತ್ತಿದೆ. ಈ ಪರಿಹಾರವನ್ನು ಪಡೆಯಲು ಮುಂದಾಗುವ ಜನರಿಗೆ ಸರ್ಕಾರ ಕೇಳುವ ದಾಖಲೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.