ರಾಮನಗರ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ರಾಮನಗರ ಜಿಲ್ಲೆ ಬಿಡದಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರ ಪ್ರೌಢಶಾಲೆ, ರಾಮನಗರದ ಶಾಂತಿನಿಕೇತನ ಶಾಲೆ, ಭಾರತೀಯ ಸಾಂಸ್ಕೃತಿ ವಿದ್ಯಾಪೀಠ, ಸರ್ಕಾರಿ ಪದವಿ ಪೂರ್ವ ಕಾಲೇಜು, ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೆಂಟ್ ಆನ್ಸ್ ಪ್ರೌಢಶಾಲೆ ಹಾಗೂ ಚನ್ನಪಟ್ಟಣದ ಚೆಕ್ಕೆರೆಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳ ಪರಿಶೀಲನೆ ನಡೆಸಿದರು.
ಪರಿಶೀಲನೆಯ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಕ್ಕಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಯಾಗಬೇಕು. ಪರೀಕ್ಷಾ ನೋಂದಣಿ ಸಂಖ್ಯೆ ವಿದ್ಯಾರ್ಥಿಗಳಿಗೆ ಗೋಚರವಾಗುವ ರೀತಿ ಪ್ರದರ್ಶನವಾಗಬೇಕು. ಈ ಬಾರಿ ಪರೀಕ್ಷೆ ಒಎಂಆರ್ ಶೀಟ್ನಲ್ಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ನೋಂದಣಿ ಸಂಖ್ಯೆ ಸರಿಯಾಗಿ ವಿದ್ಯಾರ್ಥಿಗಳು ನಮೂದಿಸಿರುವ ಬಗ್ಗೆ ಪರೀಕ್ಷಾ ಮೇಲ್ವಿಚಾರಕರು ಪರಿಶೀಲಿಸುವಂತೆ ತಿಳಿಸಿದರು.
ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಹತ್ತಿರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ್ವರ, ಕೆಮ್ಮು, ನೆಗಡಿ ಅಂತಹ ಲಕ್ಷಣ ಕಂಡು ಬಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಹಾಗೂ ಅವರಿಗೆ ಎನ್ 95 ಮಾಸ್ಕ್ ನೀಡಲಾಗುವುದು. ಮಾಸ್ಕ್ ಮರೆತು ಬಂದ ವಿದ್ಯಾರ್ಥಿಗಳಿಗೂ ಸಹ ಮಾಸ್ಕ್ ಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಇದರಲ್ಲಿ ಶಾಲೆಗಳ ಪ್ರತಿನಿಧಿಗಳು, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಘ-ಸಂಸ್ಥೆಗಳು, ನಿಮ್ಹಾನ್ಸ್ ವೈದ್ಯರು, ಜಯದೇವ ಆಸ್ಪತ್ರೆಯ ವೈದ್ಯರು, ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಪ್ರತಿನಿಧಿಗಳು ಸಭೆ ನಡೆಸಿದ್ದು, ಯಾವ ತರಗತಿಗಳನ್ನು ಮೊದಲು ಪ್ರಾರಂಭಿಸಬೇಕು, ಯಾವಾಗ ಪ್ರಾರಂಭಿಸಬೇಕು, ಯಾವ ರೀತಿ ಪ್ರಾರಂಭಿಸಬೇಕೆಂಬುದನ್ನು ಈ ತಿಂಗಳ ಅಂತ್ಯದಲ್ಲಿ ವರದಿ ನೀಡಲಿದ್ದಾರೆ ಎಂದು ತಿಳಿಸಿದರು.