ರಾಮನಗರ :ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ ಮಾಹಿತಿ ನೀಡಿದ ರಾಮನಗರ ಎಸ್ಪಿ ಗಿರೀಶ್.. ಕಳೆದ ಸೆಪ್ಟೆಂಬರ್ 30ರಂದು ನಟಿ ಸವಿ ಮಾದಪ್ಪ, ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯ ಸನ್ ವರ್ತ್ ಅಪಾರ್ಟ್ಮೆಂಟ್ನ ಫ್ಲಾಟ್ ನಂ. 901ರಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ನಟಿಯ ತಂದೆ ಪ್ರಭು ಮಾದಪ್ಪ, ಬಾಯ್ ಫ್ರೆಂಡ್ ವಿವೇಕ್ ಹಾಗೂ ಮೇಕಪ್ ಮ್ಯಾನ್ ಮಹೇಶ್ ವಿರುದ್ಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ನೇಣು ಬಿಗಿದುಕೊಂಡು ಸಾವಾಗಿದೆ ಎಂದು ವರದಿ ನೀಡಿದ್ದಾರೆ. ಆದರೆ, ದೇಹದ ಇತರೆ ಭಾಗಕ್ಕೆ ಬೇರೆ ಏನಾದರೂ ಸೇರಿದಿಯಾ ಎಂದು ತಿಳಿಯಲು ಮೃತ ಸವಿಯ ದೇಹದ ಕೆಲ ಭಾಗಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು.
ಆ ವರದಿ ಬಂದು ನಂತರ ಸಾವಿನ ಅಂತಿಮ ವರದಿಯನ್ನು ಕುಂಬಳಗೂಡು ಪೊಲೀಸರಿಗೆ ವೈದ್ಯರು ನೀಡಲಿದ್ದಾರೆ. ಡೆತ್ನೋಟ್ನಲ್ಲಿರುವ ಬರವಣಿಗೆ ಸವಿ ಮಾದಪ್ಪನವರದ್ದು ಎಂದು ತಿಳಿಯಲು ಪೊಲೀಸರು, ಪತ್ರವನ್ನು ಎಫ್ಎಸ್ಎಲ್ಗೆ ರವಾನಿಸಿದ್ದಾರೆ ಎಂದು ರಾಮನಗರ ಎಸ್ಪಿ ಗಿರೀಶ್ ತಿಳಿಸಿದ್ದಾರೆ.
ಇದನ್ನೂ ಓದಿ: COVID Report..ರಾಜ್ಯದಲ್ಲಿಂದು 462 ಮಂದಿಗೆ ಸೋಂಕು, 9 ಜನ ಸಾವು