ರಾಮನಗರ:ಸರ್ಕಾರಿ ಆಸ್ಪತ್ರೆ ಎಂದರೆ ರೋಗಿಗಳನ್ನ ನಿರ್ಲಕ್ಷ್ಯ ಮಾಡುತ್ತಾರೆ. ಸರಿಯಾದ ನಿರ್ವಹಣೆ ಮಾಡುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ಇಲ್ಲ. ಸೇವಾ ಮನೋಭಾವನೆ ಇರೋದಿಲ್ಲ ಎಂಬ ಆರೋಪಗಳು ಸರ್ಕಾರಿ ವೈದ್ಯರಿಗೆ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ಈ ನಡುವೆ ಇಲ್ಲೊಬ್ಬ ವೈದ್ಯ ತಮ್ಮ ಸ್ವಂತ ಹಣ 2 ಲಕ್ಷ ರೂ. ಖರ್ಚು ಮಾಡಿ ಕೊರೊನಾ ಸೋಕಿಂತರಿಗೆ ನೆರವಾಗಿದ್ದಾರೆ.
ಹೌದು, ವೈದ್ಯ ಡಾ. ರಾಜ್ ಕುಮಾರ್ ಅವರು ಸೋಂಕಿತರಿಗೆ ಅಕೂಲವಾಗಲೆಂದು ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪಾಯಿಂಟ್ ಅಳವಡಿಸಿದ್ದಾರೆ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ರಾಜ್ ಕುಮಾರ್ ತಮ್ಮ ಸಹೋದರ ಶ್ರೀನಿವಾಸ್ ಜೊತೆಗೂಡಿ ವಾಯು ಸಂಜೀವಿನಿ ಎಂಬ ಹೆಸರಿನಡಿಯಲ್ಲಿ ತಮ್ಮ ಸ್ವಂತ 2 ಲಕ್ಷ ರೂ. ಖರ್ಚು ಮಾಡಿ ತುರ್ತು ಚಿಕಿತ್ಸಾ ಘಟಕಕ್ಕೆ 20 ಆಕ್ಸಿಜನ್ ಪಾಯಿಂಟ್ಗಳನ್ನು ಅಳವಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
100 ಬೆಡ್ಗಳಿರುವ ಈ ಸರ್ಕಾರಿ ಆಸ್ಪತ್ರೆಯಲ್ಲಿ 50 ಬೆಡ್ಗಳನ್ನು ಕೊರೊನಾ ಸೋಂಕಿತರಿಗಾಗಿಯೇ ಮೀಸಲಿಡಲಾಗಿದೆ. ಇದರಲ್ಲಿ 30 ಬೆಡ್ಗಳಿಗೆ ಮಾತ್ರ ಆಕ್ಸಿಜನ್ ಪಾಯಿಂಟ್ಗಳನ್ನ ಅಳವಡಿಸಿ ತೀವ್ರ ಉಸಿರಾಟ ತೊಂದರೆ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಉಳಿದಂತೆ 20 ಬೆಡ್ಗಳಿಗೂ ಅನುಕೂಲವಾಗುವಂತೆ ಡಾ. ರಾಜ್ ಕುಮಾರ್ ತಮ್ಮ ಸ್ವಂತ ಹಣ ಖರ್ಚು ಮಾಡಿ ಆಕ್ಸಿಜನ್ ಪಾಯಿಂಟ್ಗಳನ್ನ ಅಳವಡಿಸಿದ್ದಾರೆ.