ರಾಮನಗರ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೋಟಿ ಕುಳಗಳ ಸ್ಪರ್ಧೆ ಗಮನ ಸೆಳೆದಿದ್ದು, ಅದರಲ್ಲೂ ರೇಷ್ಮೆನಗರಿ ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬದ ₹1,414 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಮತದಾರರ ಹುಬ್ಬೇರಿಸಿದೆ. ಶಿವಕುಮಾರ್ ಕನಕಪುರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ 108 ಪುಟಗಳಲ್ಲಿ ಆಸ್ತಿ ವಿವರ ನೀಡಿದ್ದಾರೆ.
ಡಿಕೆಶಿ ಅವರ ವೈಯಕ್ತಿಕ ಆಸ್ತಿಯೇ ₹1,214 ಕೋಟಿ ದಾಟಿದೆ. ಅವರ ಪತ್ನಿ ಉಷಾ 133 ಕೋಟಿ ಹಾಗೂ ಪುತ್ರ ಆಕಾಶ್ ₹66 ಕೋಟಿ ಆಸ್ತಿ ಹೊಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬಳಿ ₹970 ಕೋಟಿಯಷ್ಟು ಸ್ಥಿರಾಸ್ತಿ, ₹244 ಕೋಟಿ ಚರಾಸ್ತಿ ಇದ್ದು, ₹226 ಕೋಟಿ ಸಾಲವನ್ನೂ ಹೊಂದಿದ್ದಾರೆ. ಡಿಕೆಶಿ ಬಳಿ ₹23 ಲಕ್ಷ ಮೌಲ್ಯದ ಯೂಬ್ಲೆಟ್ ವಾಚ್ ಸಹ ಇದ್ದು, ಅವರು ಸದ್ಯ ವರ್ಷಕ್ಕೆ ₹14 ಕೋಟಿಯಷ್ಟು ಆದಾಯ ಗಳಿಸುತ್ತಿದ್ದಾರೆ. ಕುಟುಂಬದವರಲ್ಲಿ 4 ಕೆ.ಜಿ. ಯಷ್ಟು ಬಂಗಾರದ ಸಂಗ್ರಹವೂ ಇದೆ. ರಾಜ್ಯದ ವಿವಿಧೆಡೆ ಕೃಷಿ, ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ.
2013ರಲ್ಲಿ ಡಿಕೆಶಿ ಕುಟುಂಬದ ಆದಾಯವು ₹252 ಕೋಟಿ ಇದ್ದು, 2018ರಲ್ಲಿ ಅದು ₹840 ಕೋಟಿಗೆ ಏರಿಕೆ ಆಗಿತ್ತು. ಸದ್ಯ ಅವರ ಮೇಲೆ ವಿವಿಧ ಕ್ರಿಮಿನಲ್ ಪ್ರಕರಣಗಳೂ ಸೇರಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:ಕೋಟಿ ಕೋಟಿ ಆಸ್ತಿಗೆ ಅಧಿಪತಿಯಾಗಿರುವ ಕಮಲ ಅಭ್ಯರ್ಥಿಗಳು: ಉದಯ್ ಗರುಡಾಚಾರ್ ಕೆಜಿ ಕೆಜಿ ಚಿನ್ನಾಭರಣದ ಕುಬೇರ!